ಶನಿವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಟೀಂ ಇಂಡಿಯಾದ ಅಭ್ಯಾಸದ ವೇಳೆ ಅನಿರೀಕ್ಷಿತ ಬೌಲರ್ ಒಬ್ಬರು ಕಾಣಿಸಿಕೊಂಡರು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಿದರು. ಅದು ಬೇರೆ ಯಾರೂ ಅಲ್ಲ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಬೌಲರ್ ಹರ್‌ಪ್ರೀತ್ ಬ್ರಾರ್ ಎಂದು ಸ್ಥಳದಲ್ಲಿದ್ದ ಭಾರತೀಯ ಪತ್ರಕರ್ತರು ವರದಿ ಮಾಡಿದ್ದಾರೆ.
ಹರ್‌ಪ್ರೀತ್ ಬ್ರಾರ್ ಅಧಿಕೃತವಾಗಿ ಭಾರತೀಯ ತಂಡದ ಭಾಗವಾಗಿರಲಿಲ್ಲ. ಅವರು ತಂಡದ ಕಿಟ್ ಧರಿಸಿರಲಿಲ್ಲ ಅಥವಾ ತಂಡದ ಸದಸ್ಯರಾಗಿ ತರಬೇತಿ ಪಡೆಯುತ್ತಿರಲಿಲ್ಲ. ಬದಲಿಗೆ ಜುಲೈ 8ರಂದು ಪ್ರಾರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ಅವರು ಸಹಾಯಕರಾಗಿ ನೆಟ್ಸ್‌ನಲ್ಲಿ ಕಾಣಿಸಿಕೊಂಡರು. ಪ್ರವಾಸಿ ತಂಡವು ಈಗಾಗಲೇ ಕಠಿಣ ಪರಿಸ್ಥಿತಿಯಲ್ಲಿದ್ದು, ಎರಡನೇ ಟೆಸ್ಟ್ ಗೆದ್ದು ಗೆಲುವಿನ ಹಾದಿಗೆ ಮರಳಬೇಕಿದೆ.
ಟೀಂ ಇಂಡಿಯಾದ ಅತ್ಯುತ್ತಮ ಬೌಲರ್ ಆಗಿರುವ ಬುಮ್ರಾ ಎಲ್ಲ ಐದು ಟೆಸ್ಟ್ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದು ತಂಡಕ್ಕೆ ತಲೆನೋವು ತಂದಿಟ್ಟಿದೆ. ತಮ್ಮ ಮೇಲಿನ ಕೆಲಸದ ಹೊರೆಯನ್ನು ನಿರ್ವಹಿಸಲು ಬುಮ್ರಾ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಆಡಲಿದ್ದಾರೆ. ಲೀಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ, ಎರಡನೇ ಪಂದ್ಯದಲ್ಲಿ ವಿಕೆಟ್ ಪಡೆಯಲಿಲ್ಲ.
ಅಭ್ಯಾಸದ ವೇಳೆ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕಂಡುಬಂದರು. ಶುಭಮನ್ ಗಿಲ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಅವರಂತಹ ಬ್ಯಾಟ್ಸ್‌ಮನ್‌ಗಳು ಅಭ್ಯಾಸಕ್ಕೆ ಗೈರುಹಾಜರಾಗಿದ್ದರೆ, ಸಾಯಿ ಸುದರ್ಶನ್ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು.
ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಇನ್ನೂ ಹೊಂದಿಕೊಳ್ಳುತ್ತಿದ್ದು, ಎರಡನೇ ಪಂದ್ಯಕ್ಕೂ ಮುನ್ನ ತಂಡದ ಆಡಳಿತ ಮಂಡಳಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಬದಲಿಗೆ ತಂಡದಲ್ಲಿ ತಜ್ಞರನ್ನು ಸೇರಿಸಿಕೊಳ್ಳಲು ನೋಡಬೇಕಾಗುತ್ತದೆ. ತಂಡದಲ್ಲಿ ಅರ್ಶದೀಪ್ ಸಿಂಗ್ ಮತ್ತು ಕುಲದೀಪ್ ಯಾದವ್ ಅವರಂತಹ ಆಟಗಾರರನ್ನು ಸೇರಿಸಿಕೊಳ್ಳಬೇಕಾಗಿದೆ.