ಮೊದಲ ಟೆಸ್ಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರ ಜಾಶ್ ಹೇಜಲ್‌ವುಡ್ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಪರದಾಡಿದ್ದು, ಆಸ್ಟ್ರೇಲಿಯಾ 159 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಬಾರ್ಬಡೋಸ್ ಟೆಸ್ಟ್ ಅನ್ನು 3 ದಿನಗಳಲ್ಲಿ ಜಯಗಳಿಸುವಲ್ಲಿ ಆತಿಥೇಯರು ಯಶಸ್ವಿಯಾದರು. ದಕ್ಷಿಣ ಆಫ್ರಿಕಾ ವಿರುದ್ಧ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಸೋತ ನಂತರ, ಪ್ಯಾಟ್ ಕಮ್ಮಿನ್ಸ್ ಮತ್ತು ಪಡೆ ಈಗ ತಮ್ಮ ಮುಂದಿನ ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದ್ದಾರೆ.
ಆಸ್ಟ್ರೇಲಿಯಾ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ ಕಳಪೆ ಆರಂಭವನ್ನು ಕಂಡಿತು. ಆದರೆ, ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಂಡವನ್ನು ಉತ್ತಮವಾಗಿ ಮುನ್ನಡೆಸಿದರು. ಟ್ರಾವಿಸ್ ಹೆಡ್ (61), ಬ್ಯೂ ವೆಬ್‌ಸ್ಟರ್ (63) ಮತ್ತು ಅಲೆಕ್ಸ್ ಕ್ಯಾರಿ (65) ಅರ್ಧಶತಕಗಳನ್ನು ಗಳಿಸುವ ಮೂಲಕ ಎರಡನೇ ಇನಿಂಗ್ಸ್‌ನ ಕೊನೆಯಲ್ಲಿ ಪ್ರವಾಸಿ ತಂಡವು 310 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಕೊನೆಯ ಹಂತದಲ್ಲಿ ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಹೇಜಲ್‌ವುಜ್ ಕೂಡ ಬ್ಯಾಟಿಂಗ್‌ನಲ್ಲಿ ತಮ್ಮ ಅಮೂಲ್ಯ ರನ್‌ಗಳನ್ನು ಸೇರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮುನ್ನಡೆ ತಂದುಕೊಟ್ಟರು.
ಮೊದಲ ಓವರ್‌ನಲ್ಲೇ ಆರಂಭಿಕ ಆಟಗಾರ ಬ್ರಾಥ್‌ವೈಟ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಆರಂಭಿಕ ಯಶಸ್ಸನ್ನು ಕಂಡಿತು. ನಂತರ ಹೇಜಲ್‌ವುಡ್ ವೆಸ್ಟ್ ಇಂಡೀಸ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ ಕಡೆಗೆ ಕಳುಹಿಸಿದರು. ಜಾನ್ ಕ್ಯಾಂಪ್ಬೆಲ್, ಕೀಸಿ ಕಾರ್ಟಿ, ಬ್ರಾಂಡನ್ ಕಿಂಗ್, ರೋಸ್ಟನ್ ಚೇಸ್ ಮತ್ತು ಜೋಮೆಲ್ ವಾರಿಕನ್ ಅವರ ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
ಟೈಲೆಂಡರ್ ಶಮರ್ ಜೋಸೆಫ್ (44) ಹೋರಾಡಲು ಪ್ರಯತ್ನಿಸಿದರು ಆದರೆ ನಾರ್ಥನ್ ಲಿಯಾನ್ ಅವರಿಗೆ ವಿಕೆಟ್ ಒಪ್ಪಿಸಿದರು. ಹೇಜಲ್‌ವುಡ್ ತಮ್ಮ 13ನೇ ಐದು ವಿಕೆಟ್ ಗೊಂಚಲಿನ ಮೂಲಕ ಪಂದ್ಯವನ್ನು ಮುಗಿಸಿದರು. ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಅನ್ನು 159 ರನ್‌ಗಳಿಂದ ಸೋಲಿಸಿತು.