ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಅದೊಂದು ಸಾಂಪ್ರದಾಯಿಕ ಯುದ್ಧದಂತೆಯೇ ಭಾಸವಾಗುತ್ತದೆ. ಆದರೆ, ಕಳೆದ ಒಂದೆರಡು ವರ್ಷಗಳಿಂದ ಎರಡು ತಂಡಗಳ ಪ್ರದರ್ಶನಗಳ ನಡುವೆ ದೊಡ್ಡ ಕಂದಕವನ್ನು ಕಾಣಬಹುದು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದ ಹಣಾಹಣಿಯಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಪಂದ್ಯಾವಳಿಯಿಂದಲೇ ಹೊರದಬ್ಬಿದೆ. ಆದರೆ, ಪಾಕಿಸ್ತಾನದ ದಿಗ್ಗಜ ಸಕ್ಲೇನ್ ಮುಷ್ತಾಕ್ ಈ ತೀರ್ಪನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
24 ನ್ಯೂಸ್ ಎಚ್‌ಡಿ ಚಾನೆಲ್‌ನಲ್ಲಿ ನಡೆದ ಮಾತುಕತೆಯಲ್ಲಿ ಸಕ್ಲೇನ್, ನೀವು ನಿಜವಾಗಿಯೂ ಉತ್ತಮ ತಂಡವಾಗಿದ್ದರೆ, ಪಾಕಿಸ್ತಾನದೊಂದಿಗೆ 10 ಟೆಸ್ಟ್‌ಗಳು, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡುವಂತೆ ಭಾರತಕ್ಕೆ ಸವಾಲೆಸೆದಿದ್ದಾರೆ.
'ನಾವು ರಾಜಕೀಯ ವಿಷಯಗಳನ್ನು ಬದಿಗಿಟ್ಟರೆ, ಅವರ ಆಟಗಾರರು ತುಂಬಾ ಒಳ್ಳೆಯವರು ಮತ್ತು ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ನೀವು ನಿಜವಾಗಿಯೂ ಉತ್ತಮ ತಂಡವಾಗಿದ್ದರೆ, ಪಾಕಿಸ್ತಾನದ ವಿರುದ್ಧ 10 ಟೆಸ್ಟ್, 10 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಲಿ ಎಂದು ನಾನು ಭಾವಿಸುತ್ತೇನೆ. ಆಗ ಎಲ್ಲವೂ ಸ್ಪಷ್ಟವಾಗುತ್ತದೆ' ಎಂದಿದ್ದಾರೆ. ಈ ವೇಳೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾನ್-ಉಲ್-ಹಕ್ ಕೂಡ ಇದ್ದರು.
ಕಳೆದೆರಡು ವರ್ಷಗಳಿಂದ ಪಾಕಿಸ್ತಾನ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದು ನಾಯಕತ್ವ, ಆಯ್ಕೆ ಸಮಿತಿ, ನಿರ್ವಹಣೆ, ಅಥವಾ ಮಂಡಳಿಯ ಅಧಿಕಾರಿಗಳಾಗಿರಲಿ, ಪ್ರತಿಯೊಂದು ಸ್ಥಾನಕ್ಕೂ ಅನೇಕ ಪ್ರಮುಖ ವ್ಯಕ್ತಿಗಳು ಬಂದು ಹೋಗಿದ್ದಾರೆ. ಆದರೆ, ತಂಡದಲ್ಲಿನ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಪ್ರದರ್ಶನ ಮತ್ತು ಕಾರ್ಯಕ್ಷಮತೆಯ ಕೊರತೆ ನಡುವಿನ ವ್ಯತ್ಯಾಸವು ಕಾಲಾನಂತರದಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಸದ್ಯ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ಆದರೆ, ಈ ಕಾಲ ಇನ್ನೂ ಮೀರಿಲ್ಲ. ತಂಡವು ಸರಿಯಾದ ಮನಸ್ಸು ಮತ್ತು ನಿರ್ಣಯದೊಂದಿಗೆ ಮುಂದಾದರೆ ಸಮಸ್ಯೆಯನ್ನು ಸರಿಪಡಿಸಬಹುದು ಎಂದಿದ್ದಾರೆ.
'ನಾವು ನಮ್ಮ ಸಿದ್ಧತೆಯನ್ನು ಸರಿಯಾಗಿ ಮಾಡಿಕೊಂಡರೆ ಮತ್ತು ಸರಿಯಾದ ದಿಕ್ಕಿನಲ್ಲಿ ವಿಷಯಗಳನ್ನು ವಿಂಗಡಿಸಿದರೆ, ನಾವು ಜಗತ್ತಿಗೆ ಮತ್ತು ಭಾರತಕ್ಕೂ ದೃಢವಾದ ಉತ್ತರವನ್ನು ನೀಡುವ ಪರಿಸ್ಥಿತಿಯಲ್ಲಿರುತ್ತೇವೆ' ಎಂದು ಮುಷ್ತಾಕ್ ಹೇಳಿದರು.
ಟೀಮ್ ಇಂಡಿಯಾ ಸದ್ಯ ಐಸಿಸಿ ಕಾರ್ಯಕ್ರಮಗಳಲ್ಲಿ ಮಾತ್ರ ಪಾಕಿಸ್ತಾನದ ವಿರುದ್ಧ ಆಡುತ್ತಿದೆ. ದ್ವಿಪಕ್ಷೀಯ ಕ್ರಿಕೆಟ್‌ಗೆ ಇನ್ನೂ ಕಾಲ ಕೂಡಿಬಂದಿಲ್ಲ.