ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಹೌದು... ಇಂದು ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಭಾರತದ ಪರ ಅತೀ ಹೆಚ್ಚು ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದು ಅವರ 335ನೇ ಕ್ಯಾಚ್ ಆಗಿದ್ದು, ಆ ಮೂಲಕ ಭಾರತದ ಪರ ಅತೀ ಹೆಚ್ಚು ಕ್ಯಾಚ್ ಹಿಡಿದ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ.
ದ್ರಾವಿಡ್ ದಾಖಲೆ ಪತನ
ಇನ್ನು ಈ ಕ್ಯಾಚ್ ಮೂಲಕ ಕೊಹ್ಲಿ ಭಾರತದ ಮಾಜಿ ಆಟಗಾರ ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ದ್ರಾವಿಡ್ ಒಟ್ಟು 333 ಕ್ಯಾಚ್ ಗಳನ್ನು ಪಡೆದಿದ್ದು, 261 ಕ್ಯಾಚ್ ಗಳನ್ನು ಪಡೆದಿರುವ ಮಹಮದ್ ಅಜರುದ್ದೀನ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಭಾರತದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ 256 ಕ್ಯಾಚ್ ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ 229 ಕ್ಯಾಚ್ ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.
ಪಾಂಟಿಂಗ್ ದಾಖಲೆಯೂ ಪತನ
ಇದೇ ವೇಳೆ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಓರ್ವ ಫೀಲ್ಡರ್ ಆಗಿ ಒಟ್ಟು 161 ಕ್ಯಾಚ್ ಪಡೆದಿದ್ದು, ಈ ಪಟ್ಟಿಯಲ್ಲಿ ರಿಕ್ಕಿ ಪಾಂಟಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಪಾಂಟಿಂಗ್ ಒಟ್ಟು 160 ಕ್ಯಾಚ್ ಪಡೆದಿದ್ದು, ಕೊಹ್ಲಿ 161 ಕ್ಯಾಚ್ ಪಡೆದು ಈ ದಾಖಲೆ ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಮಹೇಲಾ ಜಯವರ್ಧನೆ ಅಗ್ರಸ್ಥಾನದಲ್ಲಿದ್ದು, ಅವರು ಒಟ್ಟು 218 ಕ್ಯಾಚ್ ಪಡೆದಿದ್ದಾರೆ.
Most catches as a fielder in ODIs
218 - Mahela Jayawardene
161 - Virat Kohli
160 - Ricky Ponting
156 - Mohammad Azharuddin
142 - Ross Taylor