ಐಸಿಸಿ ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸಿದ್ದು, ಫೈನಲ್ ನಲ್ಲಿ ಭಾರತದ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾಗೆ ಗೆಲ್ಲಲು 363 ರನ್‌ಗಳ ಗುರಿ ನೀಡಿತ್ತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ 9ವಿಕೆಟ್ ನಷ್ಟಕ್ಕೆ 312 ರನ್ ಗಳನ್ನಷ್ಟೇ ಶಕ್ತವಾಯಿತು. ಆ ಮೂಲಕ 50 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು.
ದಕ್ಷಿಣ ಆಫ್ರಿಕಾ ಪರ ನಾಯಕ ಟೆಂಬ ಬವುಮಾ 56 ರನ್ ಗಳಿಸಿದರೆ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 69 ರನ್, ಡೇವಿಡ್ ಮಿಲ್ಲರ್ ಅಮೋಘ ಶತಕ ಗಳಿಸಿದರಾದರೂ, ತಂಡವನ್ನು ಸೋಲಿನಿಂದ ರಕ್ಷಿಸುವಲ್ಲಿ ವಿಫಲರಾದರು.
ನ್ಯೂಜಿಲೆಂಡ್ ಪರ ಮಿಚೆಸ್ ಸ್ಯಾಂಥ್ನರ್ 3 ವಿಕೆಟ್ ಪಡೆದರೆ, ಗ್ಲೇನ್ ಫಿಲಿಪ್ಸ್, ಮ್ಯಾಟ್ ಹೆನ್ರಿ ತಲಾ 2 ವಿಕೆಟ್ ಪಡೆದರೆ, ಬ್ರೇಸ್ ವೆಲ್, ರಚಿನ್ ರವೀಂದ್ರ ತಲಾ 1 ವಿಕೆಟ್ ಪಡೆದರು.
ಕಿವೀಸ್ ಭರ್ಜರಿ ಬ್ಯಾಟಿಂಗ್
ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತ ಪೇರಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 362 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಕೇವಲ 101 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 13 ಬೌಂಡರಿಗಳ ನೆರವಿನಿಂದ 108 ಪೇರಿಸಿದರೆ, 94 ಎಸೆತಗಳನ್ನು ಎದುರಿಸಿದ ಕೇನ್ ವಿಲಿಯಮ್ಸನ್ 2 ಸಿಕ್ಸರ್ ಮತ್ತು 10 ಬೌಂಡರಿಗಳ ನೆರವಿನಿಂದ 102 ರನ್ ಕಲೆಹಾಕಿದರು. ಅಂತಿಮ ಹಂತದಲ್ಲಿ ಡರಿಲ್ ಮಿಚೆಲ್ (49 ರನ್) ಮತ್ತು ಗ್ಲೆನ್ ಫಿಲಿಪ್ಸ್ (ಅಜೇಯ 49 ರನ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಕಿವೀಸ್ ಮೊತ್ತ 350ರ ಗಡಿ ದಾಟುವಂತೆ ನೋಡಿಕೊಂಡರು.