ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಭಾರತ ಫೈನಲ್ ಗೆ ಲಗ್ಗೆ ಇಟ್ಟಿದ್ದರೂ ಭಾರತದ ಕೋಚ್ ಗೌತಮ್ ಗಂಭೀರ್ ಮಾತ್ರ,ಇಲ್ಲಿಯವರೆಗೂ ಪರಿಪೂರ್ಣ ಆಟ ಆಡಿಲ್ಲ ಅಂತಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ..
ಪರಿಪೂರ್ಣ ಆಟಕ್ಕಾಗಿ ತಂಡ ಇನ್ನೂ ಹುಡುಕಾಡುತ್ತಿದ್ದು, ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಅದು ಬರುವ ವಿಶ್ವಾಸವಿದೆ ಎಂದಿದ್ದಾರೆ. ಮಂಗಳವಾರ ನಡೆದ ಮೊದಲ ಸೆಮಿಪೈನಲ್ ನಲ್ಲಿ ಕೊಹ್ಲಿ ಅವರ ವೇಗದ 84 ರನ್ ಗಳ ನೆರವಿನಿಂದ ಭಾರತ ನಾಲ್ಕು ವಿಕೆಟ್ ಗಳಿಂದ ಆಸೀಸ್ ಸೋಲಿಸಿ, ಫೈನಲ್ ಗೆ ಲಗ್ಗೆ ಇಟ್ಟಿದೆ.
ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ನೋಡಿ, ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೀವು ಮತ್ತಷ್ಟು ಸುಧಾರಿಸಲು ಬಯಸುತ್ತೀರಿ. ಎಲ್ಲಾವನ್ನೂ ಸಾಧಿಸಿದ್ದೀರಿ ಎಂದು ಹೇಳಲಾಗದು. ನಾವು ಇನ್ನೂ ಪರಿಪೂರ್ಣ ಆಟವನ್ನು ಆಡಿಲ್ಲ. ಪ್ರದರ್ಶನದಿಂದ ನಾನು ಎಂದಿಗೂ ತೃಪ್ತನಾಗುವುದಿಲ್ಲ ಎಂದರು.
ಮಾರ್ಚ್ 9 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಹಣಾಹಣಿಯಲ್ಲಿ ಭಾರತವು ಆ 'ಪರಿಪೂರ್ಣ ಆಟ' ಪ್ರದರ್ಶಿಸಬಹುದು ಎಂಬ ವಿಶ್ವಾಸವಿದೆ. ಮತ್ತಷ್ಟು ಸುಧಾರಣೆಗೆ ಬಯಸುತ್ತೇವೆ. ಅಲ್ಲದೇ ಕ್ರಿಕೆಟ್ ಮೈದಾನದಲ್ಲಿ ನಿರ್ದಯರಾಗಿರಲು ಮತ್ತು ಸಂಪೂರ್ಣವಾಗಿ ವಿನಮ್ರರಾಗಿರಲು ಬಯಸುತ್ತೇವೆ ಎಂದು ಹೇಳಿದರು.
ಕ್ರಿಕೆಟ್ ಕಂಫರ್ಟ್ ವಲಯದಿಂದ ಹೊರಗಿರಬೇಕು ಅನ್ನಿಸುತ್ತದೆ. ಒಂದು ವೇಳೆ ಎಲ್ಲರೂ ಕಂಫರ್ಟ್ ವಲಯದಲ್ಲಿದ್ದರೆ ನಂತರ ನಿಶ್ಚಲತೆ ಇರುತ್ತದೆ. ಹೀಗಾಗಿ ನಾನು ಅದನ್ನು ನಂಬುತ್ತೇನೆ. ನೀವು ಕೂಡಾ ಫಲಿತಾಂಶ ನೋಡಿದ್ದೀರಿ. ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಎಲ್ಲರೂ ಕಂಫರ್ಟ್ ಝೋನ್‌ನಿಂದ ಹೊರಗಿದ್ದಾರೆ, ಅದು ಭಾರತೀಯ ಆಟಗಾರರಿಗೆ ಮುಖ್ಯವಾದುದು ಎಂದು ನಾವು ಭಾವಿಸುತ್ತೇವೆ ಎಂದರು .
ಫೈನಲ್ ಪಂದ್ಯದ ನಂತರ ಮುಂದಿನ ಚರ್ಚೆ: ಮುಂದಿನ ದಿನಗಳಲ್ಲಿ ಕೆಲವೊಂದು ಭವಿಷ್ಯದ ಯೋಜನೆಗಳ ಕುರಿತು ಹಿರಿಯ ಆಟಗಾರರೊಂದಿಗೆ ಮಾತುಕತೆ ನಡೆಸಬೇಕಾಗಿದೆ. ಆದರೆ, ಈಗ ತನ್ನ ಗಮನವೆಲ್ಲಾ ICC ಚಾಂಪಿಯನ್ ಟ್ರೋಫಿಯತ್ತ ನೆಟ್ಟಿದೆ ಎಂದು ಗೌತಮ್ ಗಂಭೀರ್ ತಿಳಿಸಿದರು.