ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅಂತಿಮ ಹಂತಕ್ಕೆ ಬಂದಿದ್ದು, ಇದರ ಬೆನ್ನಲ್ಲೇ ಫೈನಲ್ ಗೇರಿರುವ ಭಾರತ ತಂಡದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.
ಹೌದು... ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಸೋತ ನಂತರ ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತು ತೀವ್ರ ಚರ್ಚೆ ನಡೆದಿತ್ತು. ರೋಹಿತ್ ಶರ್ಮಾ 38 ವರ್ಷ ವಯಸ್ಸಿನವರಾಗಿದ್ದು, ಈಗಾಗಲೇ ಅವರು ಟಿ20ಐ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ.
2024 ರ ಟಿ20 ವಿಶ್ವಕಪ್ ಗೆಲುವಿನ ನಂತರ, ರೋಹಿತ್ ಶರ್ಮಾ ಮಾತ್ರವಲ್ಲದೇ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಕೂಡ ಚುಟುಕು ಕ್ರಿಕೆಟ್ ನಿಂದ ನಿವೃತ್ತಿಯಾಗಿದ್ದು, ಕೇವಲ ಎರಡು ಸ್ವರೂಪಗಳತ್ತ ಗಮನಹರಿಸಲು ನಿರ್ಧರಿಸಿದ್ದಾರೆ.
ಏತನ್ಮಧ್ಯೆ ಭಾರತದ ಮುಂದಿನ ಟೆಸ್ಟ್ ಸರಣಿ ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡುವಾಗ ನಡೆಯಲಿದ್ದು, ಭಾರತದ ಮುಂದಿನ ಪ್ರಮುಖ ಏಕದಿನ ಪಂದ್ಯಾವಳಿ 2027 ರ ಏಕದಿನ ವಿಶ್ವಕಪ್ ಆಗಿದೆ. ಈಗ, ಚಾಂಪಿಯನ್ಸ್ ಟ್ರೋಫಿ 2025 ಮತ್ತು ಮುಂದಿನ ವಿಶ್ವಕಪ್ ನಡುವೆ ಸಾಕಷ್ಟು ಸಮಯ ಇರುವುದರಿಂದ, ಭಾರತ ತಂಡದಲ್ಲಿ ಪರಿವರ್ತನೆಯ ಸಮಯ ಬಂದಿದೆ ಎಂಬ ಚಿಂತನೆ ನಡೆದಿದೆ.
ರೋಹಿತ್ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ..
ರೋಹಿತ್ ಶರ್ಮಾ ವಯಸ್ಸಿನ ಹೊರತಾಗಿಯೂ ಅವರ ಸಾಮರ್ಥ್ಯ ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಏಕದಿನ ಕ್ರಿಕೆಟ್ ನಲ್ಲಿ 3 ದ್ವಿಶತಕ ಸಿಡಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ. ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ನೀಡುವ ಸ್ಫೋಟಕ ಆರಂಭವನ್ನು ನಿರ್ಲಕ್ಷಿಸುವುದು ಕಷ್ಟಕರ ಎನ್ನಲಾಗುತ್ತಿದೆ.
ಸೋತರೆ Rohit Sharma ನಿವೃತ್ತಿ
ಇನ್ನು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿರುವಂತೆ ಟೀಂ ಇಂಡಿಯಾದಲ್ಲಿ ಇದೀಗ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಭಾರತ ಕ್ರಿಕೆಟ್ ನ ಭವಿಷ್ಯದ ನಿಟ್ಟಿನಲ್ಲಿ ಕೆಲ ದೃಢ ನಿರ್ಣಯಗಳನ್ನು ಕೈಗೊಳ್ಳುವ ಕಾಲ ಸನ್ನಿಹಿತವಾಗಿದೆ ಎನ್ನಲಾಗಿದೆ. ಪ್ರಮುಖವಾಗಿ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಭಾರತ ತಂಡದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಇದಕ್ಕೆ ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿದ್ದು, ಈ ಫೈನಲ್ ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋತರೆ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಿಂದಲೂ ನಿವೃತ್ತಿ ಹೊಂದಬಹುದು ಎಂದು ಬಿಸಿಸಿಐ ಮೂಲವೊಂದು ಹೇಳಿದೆ. ಅಂತೆಯೇ ಆ ಪಂದ್ಯವನ್ನು ಭಾರತ ಗೆದ್ದರೆ, ರೋಹಿತ್ ಶರ್ಮಾ ಅವರ ನಿರ್ಧಾರದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಅವರು ನಾಯಕ ಸ್ಥಾನದಿಂದ ಕೆಳಗಿಳಿದು ಓರ್ವ ಆಟಗಾರನಾಗಿ ಮುಂದುವರೆಯಬಹುದು. ಎರಡೂ ಸಂದರ್ಭಗಳಲ್ಲಿ, ನಿರ್ಧಾರವು ಸಂಪೂರ್ಣವಾಗಿ ರೋಹಿತ್ ಅವರ ಮೇಲಿರುತ್ತದೆ ಎಂದು ಹೇಳಲಾಗಿದೆ.
ನಾಯಕನ ರೇಸ್ ನಲ್ಲಿ ಇಬ್ಬರು ಆಟಗಾರರು
ಭಾರತವು 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಅನ್ನು ಗೆದ್ದರೆ, ರೋಹಿತ್ ಏಕದಿನ ಪಂದ್ಯಗಳಲ್ಲಿ ಮಾತ್ರ ಆಟಗಾರನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ರೋಹಿತ್ ಶರ್ಮಾ ನಾಯಕ ಸ್ಥಾನ ತ್ಯಜಿಸಿದರೆ, ಯಾರು ತಂಡದ ನಾಯಕನಾಗುತ್ತಾರೆ ಎಂಬ ಪ್ರಶ್ನೆ ಎದ್ದಿದ್ದು, ಇದಕ್ಕೆ ಭಾರತ ತಂಡದ ಇಬ್ಬರು ಆಟಗಾರರ ಹೆಸರು ಬಲವಾಗಿ ಕೇಳಿಬರುತ್ತಿದೆ. ಟೀಂ ಇಂಡಿಯಾ ಹಾಲಿ ಉಪ ನಾಯಕ ಶುಭ್ ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯಾ ಹೆಸರು ಮುಂದಿನ ನಾಯಕ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ.