2025ರ ಚಾಂಪಿಯನ್ಸ್ ಟ್ರೋಫಿ ಪ್ರಾರಂಭಕ್ಕೂ ಮುನ್ನ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ, ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿನ ಸೋಲಿನಿಂದ ಟೀಕೆಗೆ ಗುರಿಯಾಗಿತ್ತು. ಭಾರತ ತಂಡದ ಕಟ್ಟಾ ಬೆಂಬಲಿಗರ ಮನಸ್ಸಿನಲ್ಲಿಯೂ ತಂಡದ ಭವಿಷ್ಯದ ಬಗ್ಗೆ ಹಲವು ಅನುಮಾನಗಳು ಉಂಟಾಗಿದ್ದವು. ಆದರೆ, ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ಫಾರ್ಮ್‌ಗೆ ಮರಳಿತು. ಆರಂಭಿಕ ಪಂದ್ಯದಿಂದ ಫೈನಲ್ ಪಂದ್ಯದವರೆಗೂ ಎಲ್ಲ ಪಂದ್ಯಗಳನ್ನು ಗೆದ್ದು ಬೀಗಿತು. ಭಾನುವಾರ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿತು.
ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿಬಂದವು. ತಕ್ಷಣಕ್ಕೆ ನಿವೃತ್ತಿ ಘೋಷಿಸಿಲ್ಲವಾದರೂ, ಭಾರತ ಜಯಗಳಿಸಿದ ನಂತರ ತಂಡವು ಉತ್ತಮ ಆಟಗಾರರ ಕೈಯಲ್ಲಿದೆ ಎಂದು ಕೊಹ್ಲಿ ಹೇಳಿದ್ದಾರೆ.
'ಇದು ಅದ್ಭುತವಾಗಿದೆ, ಆಸ್ಟ್ರೇಲಿಯಾ ಪ್ರವಾಸದ ನಂತರ ನಾವು ಮತ್ತೆ ಪುಟಿದೇಳಲು ಬಯಸಿದ್ದೆವು ಮತ್ತು ದೊಡ್ಡ ಪಂದ್ಯಾವಳಿಯನ್ನು ಗೆಲ್ಲಲು ಬಯಸಿದ್ದೆವು. ಇದೀಗ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿರುವುದು ಅದ್ಭುತವಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿ ಎಷ್ಟೊಂದು ಪ್ರತಿಭೆಗಳಿವೆ. ಅವರು ತಮ್ಮ ಆಟವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ನಾವು (ಹಿರಿಯರ) ಕಿರಿಯರೊಂದಿಗೆ ನಮ್ಮ ಅನುಭವವನ್ನು ಹಂಚಿಕೊಳ್ಳುತ್ತೇವೆ ಮತ್ತು ಅದು ಈ ಭಾರತೀಯ ತಂಡವನ್ನು ತುಂಬಾ ಬಲಿಷ್ಠವಾಗಿಸುತ್ತದೆ' ಎಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಂತರ ವಿರಾಟ್ ಕೊಹ್ಲಿ ಹೇಳಿದರು.
'ತಂಡವು ಪ್ರಶಸ್ತಿ ಗೆಲ್ಲಲೆಂದು ಆಟಗಾರರು ಆಡುತ್ತಾರೆ. ಒತ್ತಡದಲ್ಲಿ ಆಡುವುದು ಮತ್ತು ತಂಡ ಸಂಕಷ್ಟದಲ್ಲಿರುವಾಗ ಮುಂದೆ ಹೆಜ್ಜೆ ಹಾಕುವುದು ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಪ್ರತಿಯೊಬ್ಬ ಆಟಗಾರನು ಪಂದ್ಯಾವಳಿಯ ವಿವಿಧ ಹಂತಗಳಲ್ಲಿ ಕೊಡುಗೆ ನೀಡಿದ್ದಾರೆ. ಅಗತ್ಯವಿದ್ದಾಗ ಹೆಜ್ಜೆ ಹಾಕಿದ್ದಾರೆ ಮತ್ತು ತಂಡದ ಯಶಸ್ಸಿನಲ್ಲಿ ಪಾತ್ರ ವಹಿಸಿದ್ದಾರೆ. ತಂಡದ ಪ್ರತಿಯೊಬ್ಬ ಸದಸ್ಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ನಾವು ಅಂತಹ ಅದ್ಭುತ ತಂಡದ ಭಾಗವಾಗಿದ್ದೇವೆ. ಅಭ್ಯಾಸದ ಸಮಯದಲ್ಲಿ ಮಾಡಿದ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೇಲೆ ಯಶಸ್ಸು ನಿರ್ಮಾಣವಾಗುತ್ತದೆ. ಎಲ್ಲರ ಕಠಿಣ ಪರಿಶ್ರಮ ಮತ್ತು ಸಾಮೂಹಿಕ ಪ್ರಯತ್ನದ ನಂತರ ಗೆಲುವು ಅದ್ಭುತವಾಗಿರುತ್ತದೆ' ಎಂದು ಹೇಳಿದರು.
'ನೀವು ತಂಡವನ್ನು ತೊರೆಯುವ ಸಂದರ್ಭದಲ್ಲಿ ತಂಡವು ಉನ್ನತ ಸ್ಥಾನದಲ್ಲಿರಲಿ ಎಂದು ಬಯಸುತ್ತೀರಿ. ಮುಂದಿನ ಎಂಟು ವರ್ಷಗಳ ಕಾಲ ಜಗತ್ತನ್ನು ಎದುರಿಸಲು ಸಿದ್ಧವಾಗಿರುವ ತಂಡ ನಮ್ಮಲ್ಲಿದೆ ಎಂದು ನಾನು ಭಾವಿಸುತ್ತೇನೆ. ಶುಭಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ ಕೆಲವು ಅತ್ಯುತ್ತಮ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಕೆಎಲ್ ರಾಹುಲ್ ಪಂದ್ಯಗಳನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ ಮತ್ತು ಹಾರ್ದಿಕ್ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮವಾಗಿದ್ದಾರೆ' ಎಂದು ಕೊಹ್ಲಿ ಹೇಳಿದರು.
'ನ್ಯೂಜಿಲೆಂಡ್ ತಂಡವು ಅದ್ಭುತವಾಗಿದೆ. ಪ್ರತಿಭಾನ್ವಿತ ಗುಂಪಿನಲ್ಲಿ ಸೀಮಿತ ಸಂಖ್ಯೆಯ ಆಟಗಾರರು ಮಾತ್ರ ಇದ್ದಾರೆ. ಆದರೆ, ಅವರು ಏನು ಮಾಡಬಹುದು ಎಂಬುದರ ಬಗ್ಗೆ ನಾವು ಯಾವಾಗಲೂ ಆಶ್ಚರ್ಯಚಕಿತರಾಗಿದ್ದೇವೆ. ದೊಡ್ಡ ದೊಡ್ಡ ಕ್ರಿಕೆಟ್ ಆಡುವ ರಾಷ್ಟ್ರಗಳಿಗೆ ಹೋಲಿಸಿದರೆ ಆಯ್ಕೆ ಮಾಡಲು ಕಡಿಮೆ ಆಟಗಾರರನ್ನು ಹೊಂದಿದ್ದರೂ, ನ್ಯೂಜಿಲೆಂಡ್ ತಂಡದ ಪ್ರದರ್ಶನ ಉತ್ತಮವಾಗಿದೆ. ಅವರು ತಮ್ಮ ಕಾರ್ಯತಂತ್ರಗಳನ್ನು ನಿರಂತರವಾಗಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದು ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ಪ್ರತಿ ಪಂದ್ಯದಲ್ಲೂ ಇರಲು ಅನುವು ಮಾಡಿಕೊಡುತ್ತದೆ. ನ್ಯೂಜಿಲೆಂಡ್‌ನ ಕ್ರಿಕೆಟ್ ತಂಡವು ಆಕ್ರಮಣಕಾರಿ ಶೈಲಿಯಲ್ಲಿ ಆಡುವುದಲ್ಲದೆ, ತಮ್ಮ ಬೌಲರ್‌ಗಳಿಗೆ ಬೆಂಬಲ ನೀಡುತ್ತಾರೆ' ಎಂದು ವಿರಾಟ್ ಕೊಹ್ಲಿ ಹೇಳಿದರು.