ದುಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಟೀಂ ಆಫ್ ದಿ ಟೂರ್ನಮೆಂಟ್ ಘೋಷಣೆ ಮಾಡಿದ್ದು ತಂಡದಲ್ಲಿ ಬರೊಬ್ಬರಿ 6 ಮಂದಿ ಭಾರತೀಯ ಆಟಗಾರರಿಗೆ ಸ್ಥಾನ ನೀಡಲಾಗಿದೆ.
ಹೌದು.. 2025ರ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ನಂತ ಟೀಮ್ ಆಫ್ ದಿ ಟೂರ್ನಮೆಂಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ್ದು, ಟೂರ್ನಿಯ ಫೈನಲ್ ನಲ್ಲಿ ಮುಗ್ಗರಿಸಿದ ರನ್ನರ್ ಅಪ್ ತಂಡ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಥ್ನರ್ ಗೆ ಟೀಮ್ ಆಫ್ ದಿ ಟೂರ್ನಮೆಂಟ್ ನ ಸಾರಥ್ಯ ನೀಡಲಾಗಿದೆ.
ಉಳಿದಂತೆ ತಂಡದಲ್ಲಿ 6 ಮಂದಿ ಭಾರತೀಯ ಆಟಗಾರರಿಗೆ ಸ್ಥಾನ ಕಲ್ಪಿಸಲಾಗಿದ್ದು, ಈ ಪೈಕಿ ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಗೆ ಸ್ಥಾನ ನೀಡಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಮಹಮದ್ ಶಮಿ, ವರುಣ್ ಚಕ್ರವರ್ತಿ ಮತ್ತು ಅಕ್ಸರ್ ಪಟೇಲ್ ಸ್ಥಾನ ಗಿಟ್ಟಿಸಿದ್ದಾರೆ.
ಉಳಿದಂತೆ ಅಫ್ಘಾನಿಸ್ತಾನದ ದಾಖಲೆಯ ಶತಕವೀರ ಇಬ್ರಾಹಿಂ ಜಡ್ರನ್ ಮತ್ತು ನ್ಯೂಜಿಲೆಂಡ್ ನ ಸ್ಫೋಟಕ ಬ್ಯಾಟರ್ ರಚಿನ್ ರವೀಂದ್ರ ಆರಂಭಿಕರಾಗಿ ಆಯ್ಕೆಯಾಗಿದ್ದು, ಆಲ್ರೌಂಡರ್ ಗಳ ವಿಭಾಗದಲ್ಲಿ ನ್ಯೂಜಿಲೆಂಡ್ ಗ್ಲೆನ್ ಫಿಲಿಪ್ಸ್, ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರ್ ಝೈ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ನ್ಯೂಜಿಲೆಂಡ್ ಮ್ಯಾಟ್ ಹೆನ್ರಿ ಸ್ಥಾನ ಪಡೆದಿದ್ದಾರೆ.
ಒಟ್ಟಾರೆ ಐಸಿಸಿಯ ಟೀಂ ಆಫ್ ದಿ ಟೂರ್ನಮೆಂಟ್ ನಲ್ಲಿ ಒಟ್ಟು ಮೂರು ತಂಡಗಳ 12 ಮಂದಿ ಸ್ಥಾನ ಪಡೆದಿದ್ದು, ಈ ಪೈಕಿ ಭಾರತದ 6, ನ್ಯೂಜಿಲೆಂಡ್ ನ ನಾಲ್ಕು ಮತ್ತು ಆಫ್ಘಾನಿಸ್ತಾನ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
ಹೋಸ್ಟ್ ಪಾಕಿಸ್ತಾನಕ್ಕಿಲ್ಲ ಸ್ಥಾನ
ಇನ್ನು ಅಚ್ಚರಿ ಎಂದರೆ ಈ ಬಾರಿಯ ಐಸಿಸಿ ಟೀಂ ಆಫ್ ದಿ ಟೂರ್ನಮೆಂಟ್ ನಲ್ಲಿ ಟೂರ್ನಿ ಆಯೋಜನೆ ಮಾಡಿದ್ದ ಪಾಕಿಸ್ತಾನದ ಒಬ್ಬೇ ಆಟಗಾರ ಕೂಡ ಕಾಣಿಸಿಕೊಂಡಿಲ್ಲ. ಪಾಕಿಸ್ತಾನ ಮಾತ್ರವಲ್ಲದೇ ಸೆಮಿ ಫೈನಲ್ ಗೆ ಬಂದಿದ್ದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಯಾವೊಬ್ಬ ಆಟಗಾರ ಕೂಡ ಕಾಣಿಸಿಕೊಳ್ಳದಿರುವುದು ಅಚ್ಚರಿಗೆ ಕಾರಣವಾಗಿದೆ.