ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025)ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಕೂಡ ಮತ್ತದೇ ಜೋಷ್ ನೊಂದಿಗೆ ಮಿಲಿಯನ್ ಡಾಲರ್ ಟೂರ್ನಿಗಾಗಿ ಸಕಲ ಸಿದ್ಧತೆ ನಡೆಸಿಕೊಂಡಿದೆ.
ಏತನ್ಮಧ್ಯೆ ಆರ್ ಸಿಬಿಯ ಮಾಜಿ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಗೆ ತಂಡದ ಮತ್ತೋರ್ವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ನೇರ ಸಂದೇಶ (direct message) ಕಳುಹಿಸಿರುವ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅತ್ಯಂತ ಜನಪ್ರಿಯ ಸ್ಲೋಗನ್ 'ಈ ಸಲ ಕಪ್ ನಮ್ದೇ' ಘೋಷಣೆ ವಿಚಾರವಾಗಿ ವಿರಾಟ್ ಕೊಹ್ಲಿ ಎಬಿಡಿವಿಲಿಯರ್ಸ್ ಗೆ ಸಂದೇಶವೊಂದನ್ನು ರವಾನಿಸಿದ್ದಾರಂತೆ. ಈ ಬಗ್ಗೆ ಸ್ವತಃ ಮಾಜಿ ಆರ್‌ಸಿಬಿ ಸ್ಟಾರ್ ಆಟಗಾರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
'ಈ ಸಲ ಕಪ್ ನಮ್ದೇ' ಸ್ಲೋಗನ್ ಬಳಕೆ ಬೇಡ ಎಂದ ವಿರಾಟ್ ಕೊಹ್ಲಿ
ಬೆಂಗಳೂರು ಮೂಲದ ತಂಡವು ಅತ್ಯಂತ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿದೆ ಮತ್ತು ಫ್ರಾಂಚೈಸ್ ಲೀಗ್‌ನಲ್ಲಿ ಅನೇಕ ದಾಖಲೆಗಳನ್ನು ಮುರಿದಿದೆ, ಆದರೆ ಕಳೆದ 18 ಆವೃತ್ತಿಗಳಲ್ಲಿ ಮೂರು ಫೈನಲ್‌ಗಳಲ್ಲಿ ಭಾಗವಹಿಸಿದ್ದರೂ ಒಮ್ಮೆಯೂ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿಲ್ಲ. ಪ್ರತೀ ಬಾರಿ ಆರ್ ಸಿಬಿ ಅಭಿಮಾನಿಗಳು 'ಈ ಸಲ ಕಪ್ ನಮ್ದೇ' ಸ್ಲೋಗನ್ ಬಳಸಿ ಕೊನೆಯಲ್ಲಿ ನಿರಾಶೆ ಅನುಭವಿಸುತ್ತಿದ್ದರು. ಇದೇ ಕಾರಣಕ್ಕೆ ಇದೀಗ ವಿರಾಟ್ ಕೊಹ್ಲಿ ಈ ಸ್ಲೋಗನ್ ಬಳಕೆ ಬೇಡ ಎಂದ ಎಬಿಡಿವಿಯರ್ಸ್ ಗೆ ಸೂಚಿಸಿದ್ದರಂತೆ.
ಸ್ಲೋಗನ್ ಬಳಕೆ ಬೇಡ ಎಂದಿದ್ದೇಕೆ?
ಇದೇ ವೇಳೆ ಎಬಿಡಿವಿಲಿಯರ್ಸ್ ಕೊಹ್ಲಿ ಏಕೆ ಆ ಸ್ಲೋಗನ್ ಬಳಕೆ ಮಾಡುವುದು ಬೇಡ ಎಂದು ಹೇಳಿದ್ದಾರೆ ಎಂಬುದಕ್ಕೂ ಸ್ಪಷ್ಟನೆ ನೀಡಿದ್ದು, ಆರ್ ಸಿಬಿ ವಿಶ್ವದ ಕೆಲವು ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ 18 ವರ್ಷಗಳಿಂದ ಪ್ರಶಸ್ತಿಯನ್ನು ಎತ್ತುವಲ್ಲಿ ವಿಫಲವಾದ ಬಗ್ಗೆ ಕೊಹ್ಲಿ ಚರ್ಚಿಸಿದರು ಎಂದು ಹೇಳಿದ್ದಾರೆ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಆ ಸ್ಲೋಗನ್ ಅನ್ನು ಮತ್ತೆ ಬಳಸಿದ್ದೆ. ಮಾರನೆಯ ದಿನವೇ ನನಗೆ ಕೊಹ್ಲಿಯಿಂದ ಮೆಸೇಜ್ ಬಂತು. ಆ ಮೆಸೇಜ್ ನಲ್ಲಿ ದಯವಿಟ್ಟು ಈಗ ಆ ಸ್ಲೋಗನ್ ಬಳಕೆ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದರು. ಆ ಸಂದೇಶ ಬಂದ ಬಳಿಕ ನಾನು ಕೊಂಚ ಕಸಿವಿಸಿಗೊಂಡಿದ್ದೆ. ನಿಜ ಹೇಳಬೇಕು ಎಂದರೆ ಆರ್ ಸಿಬಿಯ ಆ ಸ್ಲೋಗನ್ ಬಳಸಲು ನನಗೂ ಮುಜುಗರವಾಗುತ್ತಿತ್ತು. ಸಾಕಷ್ಟು ವರ್ಷಗಳಿಂದ ನಾವು ಆ ಸ್ಲೋಗನ್ ಹೇಳಿಕೊಂಡು ತಿರುಗಿದ್ದೇವೆ. ಆದರೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ನನಗೂ ಆ ಸ್ಲೋಗನ್ ಹೇಳಿ ಹೇಳಿ ಸಾಕಾಗಿತ್ತು ಎಂದು ಎಬಿಡಿ ಹೇಳಿದ್ದಾರೆ.
ಅಂತೆಯೇ ತಮ್ಮ ಮಾತು ಮುಂದುವರೆಸುತ್ತಾ.. 'ಇದು ಐಪಿಎಲ್, ವಿಶ್ವಕಪ್ ಗೆಲ್ಲಬಹುದಾದ 10 ವಿಶ್ವ ದರ್ಜೆಯ ತಂಡಗಳಿವೆ. ಈ ಎಲ್ಲ ತಂಡಗಳ ಆಟಗಾರರು ಐಪಿಎಲ್ ನಲ್ಲಿದ್ದಾರೆ. ಇದು ಟ್ರೋಫಿ ಗೆಲುವು ಎಂಬುದು ನಂಬಲಾಗದಷ್ಟು ಕಷ್ಟಕರವಾದ ಪಂದ್ಯಾವಳಿ. ಇಲ್ಲಿ ಪ್ರಯಾಣ, ವಿಭಿನ್ನ ತಂಡಗಳು, ವಿಭಿನ್ನ ತಂತ್ರಗಳು ಮತ್ತು ಗಾಯಗಳಿಂದ ಪಾತ್ರವಹಿಸುವ ಹಲವು ಅಂಶಗಳಿವೆ. ಋತುವಿನಾದ್ಯಂತ ಹಲವು ವಿಷಯಗಳು ಬದಲಾಗುತ್ತಿರುತ್ತವೆ. ಆದರೆ ಟೂರ್ನಮೆಂಟ್‌ನ ಕೊನೆಯ ತುದಿಗೆ ನಮ್ಮ ಎನರ್ಜಿಯನ್ನು ಟ್ಯಾಂಕ್‌ನಲ್ಲಿ ಇರಿಸಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳುವಲ್ಲಿ ನಿರ್ವಹಿಸುವ ತಂಡವು ಸಾಮಾನ್ಯವಾಗಿ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.
18 ಲಕ್ಕಿಯಾಗಬಹುದು
ಇದೇ ವೇಳೆ ಹಾಲಿ ಟೂರ್ನಿಯ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ಎಬಿಡಿ ಹಾಲಿ 18ನೇ ಆವೃತ್ತಿಯ ಟೂರ್ನಿ ನಡೆಯುತ್ತಿದ್ದು, ಕೊಹ್ಲಿ ಜೆರ್ಸಿ ಸಂಖ್ಯೆ ಕೂಡ 18 ಆಗಿದೆ. 18 ಲಕ್ಕಿ ಎಂದು ಭಾವಿಸುತ್ತೇನೆ. ಹೀಗಾಗಿ ಈ ವರ್ಷ ಆರ್ ಸಿಬಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ತನಗಿದೆ. ಒಂದು ವೇಳೆ ಕೊಹ್ಲಿ ಟ್ರೋಫಿ ಎತ್ತಿಹಿಡಿದರೆ ಖಂಡಿತಾ ನಾನು ಅಲ್ಲಿರುತ್ತೇನೆ ಎಂದು ಎಬಿಡಿವಿಲಿಯರ್ಸ್ ಹೇಳಿದರು.