ನವದೆಹಲಿ: ಕೊನೆಗೂ ಕ್ರಿಕೆಟಿಗ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಜೋಡಿ ಅಧಿಕೃತವಾಗಿ ಬೇರ್ಪಟ್ಟಿದ್ದು, ಈ ಜೋಡಿ ಅಧಿಕೃತವಾಗಿ ಕಾನೂನಿನ ಮೂಲಕ ವಿಚ್ಛೇದನ ಪಡೆದಿದೆ.
2020ರಲ್ಲಿ ವಿವಾಹವಾದ ಈ ದಂಪತಿ, ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವರ್ಷದ ಫೆಬ್ರವರಿ 5ರಂದು, ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದರು.
ನಿನ್ನೆ ಮುಂಬೈನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರೂ ತಮ್ಮ ವಿಚ್ಛೇದನದ ಅಂತಿಮ ಪ್ರಕ್ರಿಯೆಗೆ ಹಾಜರಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೋರ್ಟ್ ವಿಚ್ಛೇದನ ಅರ್ಜಿಯನ್ನು ಸ್ವೀಕರಿಸಿ, ಇಬ್ಬರೂ ಬೇರೆ ಬೇರೆ ಆಗಲು ಅನುಮತಿ ನೀಡಿದೆ.
ಗಮನ ಸೆಳೆದ ಯುಜುವೇಂದ್ರ ಚಹಲ್ ಟೀ ಶರ್ಟ್ ಬರಹ
ಇನ್ನು ಕೋರ್ಟ್‌ಗೆ ಹಾಜರಾಗುವಾಗ ಧನಶ್ರೀ ಸರಳವಾಗಿ ಬಂದರೆ, ಚಹಲ್ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. ಧನಶ್ರೀ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್‌ನೊಂದಿಗೆ ಕ್ಯಾಶುಯಲ್ ಲುಕ್‌ನಲ್ಲಿ ಬಂದಿದ್ದರು. ಇದೆಲ್ಲಕ್ಕಿಂತ ಮುಖ್ಯವಾಗಿ ಚಹಲ್ ಟೀಶರ್ಟ್ ಮೇಲಿದ್ದ ಬರಹ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಚಹಲ್ ಧರಿಸಿದ್ದ ಕಪ್ಪು ಬಣ್ಣದ ಟೀ ಶರ್ಟ್ ಮೇಲೆ "Be your own sugar daddy" ಎಂದು ಬರೆದಿತ್ತು. ಇದೀಗ ಇದೇ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಟೀ ಶರ್ಟ್ ಬರಹದ ಮೂಲಕ ಧನಶ್ರೀ ಚಹಲ್ ಖಡಕ್ ಸಂದೇಶ?
ಇನ್ನು ಯುಜ್ವೇಂದ್ರ ಚಹಲ್ ತಮ್ಮ ಟಿ-ಶರ್ಟ್ ಮೂಲಕವೇ ಮಾಜಿ ಪತ್ನಿ ಧನಶ್ರೀ ವರ್ಮಾ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೀವನಾಂಶ ವಿಚಾರವಾಗಿ ವ್ಯಾಪಕ ಚರ್ಚೆಗಳಾಗುತ್ತಿದ್ದು, ವಿಚ್ಛೇದನದ ನಂತರ ಧನಶ್ರೀ ಅವರಿಗೆ ಚಹಲ್ ಜೀವನಾಂಶ ನೀಡಬೇಕು ಎಂಬ ಬಗ್ಗೆ ವರದಿಗಳಿವೆ. ಹೀಗಾಗಿ ವಿಚ್ಛೇದಿತ ಪತ್ನಿಯನ್ನು ಟೀಕಿಸುವ ಸಲುವಾಗಿ ಈ ಟಿಶರ್ಟ್ ಧರಿಸಿದ್ದರು ಎಂದು ನೆಟ್ಟಿಗರ ಅಭಿಪ್ರಾಯ ಪಡುತ್ತಿದ್ದಾರೆ.
ಮೂಲಗಳ ಪ್ರಕಾರ ಪ್ರಕಾರ, ನ್ಯಾಯಾಲಯದ ತೀರ್ಪಿನ ಪ್ರಕಾರ ಚಹಲ್ ಅವರಿಂದ ಧನಶ್ರೀ 4.75 ಕೋಟಿ ಜೀವನಾಂಶವನ್ನು ಪಡೆಯಲಿದ್ದಾರೆ. ಆದರೆ, ಕ್ರಿಕೆಟಿಗ ಇಲ್ಲಿಯವರೆಗೆ 2 ಕೋಟಿ 37 ಲಕ್ಷದ 55 ಸಾವಿರ ರೂಪಾಯಿಗಳನ್ನು ಮಾತ್ರ ಪಾವತಿಸಿದ್ದಾರೆ ಎಂದು ಹೇಳಲಾಗಿದೆ.
ಶುಗರ್ ಡ್ಯಾಡಿ ಎಂದರೇನು?
ಶುಗರ್ ಡ್ಯಾಡಿ ಎಂದರೆ ದುಡ್ಡಿರುವ ಶ್ರೀಮಂತ ವ್ಯಕ್ತಿ ಎಂಬ ಅರ್ಥವಿದೆ. ಆದರೆ, ಇದನ್ನು ಹಾಸ್ಯಮಯವಾಗಿ ಟೀಕೆಯ ಸಲುವಾಗಿಯೇ ಹೆಚ್ಚು ಬಳಸಲಾಗುತ್ತದೆ. ತನಗಿಂತ ಕಿರಿಯ ವಯಸ್ಸಿನ ಯುವಕ ಅಥವಾ ಯುವತಿಗಾಗಿ ಹಣ ಖರ್ಚು ಮಾಡುವ ವ್ಯಕ್ತಿ ಎಂಬ ಅರ್ಥ ಶುಗರ್ ಡ್ಯಾಡಿ ಎಂಬ ಪದಕ್ಕಿದೆ. ಇಲ್ಲಿ ಚಹಲ್ ಹಾಕಿರುವ ಟೀ ಶರ್ಟ್‌ನಲ್ಲಿ 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂದು ಬರೆಯಲಾಗಿದೆ.
ಅಂದರೆ "ನಿಮಗೆ ನೀವೇ ಶುಗರ್ ಡ್ಯಾಡಿ ಆಗಿರಿ" ಎಂಬ ಅರ್ಥ ನೀಡುತ್ತದೆ. ಇದರರ್ಥ, ನಿಮಗೆ ನೀವೇ ಆರ್ಥಿಕವಾಗಿ ಸ್ವತಂತ್ರರಾಗಿರಿ ಎಂದು ಹೇಳುವಂತಿದೆ. ಅಂದರೆ ಹಣ ಅಥವಾ ಉಡುಗೊರೆಗಳಿಗಾಗಿ ಬೇರೆಯವರನ್ನು ಅವಲಂಬಿಸುವ ಬದಲು ನಿಮ್ಮ ಹಣದ ಅಗತ್ಯವನ್ನು ನೀವೇ ಪೂರೈಸಿಕೊಳ್ಳಿ ಎಂದು ಚಹಲ್ ತಮ್ಮ ಟೀ ಶರ್ಟ್ ಮೂಲಕ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಚರ್ಚೆ ನಡೆಸಿದ್ದಾರೆ.