ಕೊಲ್ಕತ್ತಾ: ದಕ್ಷಿಣ ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಕೆಕೆಆರ್ -ಆರ್ ಸಿಬಿ ನಡುವಿನ ಉದ್ಘಾಟನಾ ಪಂದ್ಯ ಆರಂಭವಾಗಲಿದೆ. ಸಂಜೆ 7-00 ಗಂಟೆ ಟಾಸ್ ನಿರ್ಧಾರದೊಂದಿಗೆ ಸಂಜೆ 7-30 ಕ್ಕೆ ಪಂದ್ಯ ನಿಗದಿಯಾಗಿದೆ. ಆದರೆ ಪಂದ್ಯಕ್ಕೆ ವರುಣನ ಭೀತಿ ಶುರುವಾಗಿದೆ.
ಇಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಶುರುವಾಗಲಿದ್ದು, ಶ್ರೇಯ ಘೋಷಲ್ ಹಾಗೂ ದಿಶಾ ಪಟಾನಿ ಅವರಿಂದ ಮನರಂಜನಾ ಕಾರ್ಯಕ್ರಮದೊಂದಿಗೆ ಈ ಬಾರಿಯ ಐಪಿಎಲ್ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಆದರೆ ಈ ಕಾರ್ಯಕ್ರಮಕ್ಕೂ ವರುಣನ ಭಯ ಶುರುವಾಗಿದೆ.
ನಿನ್ನೆ ಸಂಜೆ ಕೆಕೆಆರ್ ಹಾಗೂ ಆರ್ ಸಿಬಿ ಅಭ್ಯಾಸದ ವೇಳೆಯಲ್ಲಿ ತುಂತುರು ಮಳೆ ಸುರಿದ ಹಿನ್ನೆಲೆಯಲ್ಲಿ ಬೇಗನೆ ಅಭ್ಯಾಸವನ್ನು ಮುಕ್ತಾಯಗೊಳಿಸಲಾಯಿತು. ಉಭಯ ತಂಡಗಳು ಸಂಜೆ 5 ಗಂಟೆಗೆ ಅಭ್ಯಾಸ ಆರಂಭಿಸಿದ್ದವು. ಆದರೆ 6 ಗಂಟೆ ವೇಳೆಗೆ ಮಳೆ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮೈದಾನವನ್ನು ಟಾರ್ಪಲಿನ್ ನೊಂದಿಗೆ ಮುಚ್ಚಿದರು.
ಆಟಗಾರರು ಕೂಡಾ ತಮ್ಮ ಸಿದ್ದತಾ ಕಾರ್ಯಗಳನ್ನು ಅಲ್ಲಿಗೆ ಪೂರ್ಣಗೊಳಿಸಿದರು. ಹವಾಮಾನ ಇಲಾಖೆ ಇಂದು ಕೂಡಾ ಆರೆಂಜ್ ಆಲರ್ಟ್ ಘೋಷಿಸಿದ್ದು, ಗುಡುಗು ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆ ಬಂದರೆ ಪಂದ್ಯ ರದ್ದಾಗುವ ಸಾಧ್ಯತೆಯೂ ಇದೆ.