ಚೆನ್ನೈ: ಈ ಹಿಂದೆ ಕಳ್ಳಾಟ ಆಡಿ ಐಪಿಎಲ್ ನಿಂದ 2 ವರ್ಷ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಇದೀಗ ಮತ್ತೆ ಅಂತಹುದೇ ಗಂಭೀರ ಆರೋಪ ಕೇಳಿಬಂದಿದೆ.
ನಿನ್ನೆ ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಗಂಭೀರ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವೇಳೆ ಚೆನ್ನೈ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ವೇಗಿ ಖಲೀಲ್ ಅಹ್ಮದ್ ರ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ವಿಡಿಯೋಯಿಂದಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆಂಡು ವಿರೂಪಗೊಳಿಸಿದೆ ಎಂಬ ಆರೋಪ ಹುಟ್ಟಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.
ಇಷ್ಟಕ್ಕೂ ವಿಡಿಯೋದಲ್ಲಿ ಏನಿದೆ?
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸಿಎಸ್ಕೆ ತಂಡವು ಆರಂಭಿಕ ಯಶಸ್ಸು ಪಡೆದುಕೊಂಡಿತ್ತು. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಎಡಗೈ ವೇಗಿ ಖಲೀಲ್ ಅಹ್ಮದ್ ಬಳಿ ತೆರಳಿ ಅದೇನೋ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ವಿಡಿಯೋದಲ್ಲಿ ಖಲೀಲ್ ಅಹ್ಮದ್ ಪ್ಯಾಂಟ್ ಜೇಬಿನಿಂದ ಅದೇನೋ ತೆಗೆಯುತ್ತಿರುವಂತೆ ಕಂಡಿದೆ. ಅಲ್ಲದೆ ಆ ಬಳಿಕ ರುತುರಾಜ್ ಗಾಯಕ್ವಾಡ್ ಅವರಿಗೆ ಕೊಡುತ್ತಿದ್ದಂತೆ ಅವರು ಅದನ್ನು ಜೇಬಿನಲ್ಲಿರಿಸಿಕೊಂಡಿದ್ದಾರೆ. ಇಬ್ಬರು ಆಟಗಾರರ ನಡುವೆ ಕದ್ದುಮುಚ್ಚಿ ನಡೆದಿರುವ ಎಕ್ಸ್ಚೇಂಜ್ ವಿಡಿಯೋ ಇದೀಗ ವೈರಲ್ ಆಗಿದೆ.
ಖಲೀಲ್ ಕೊಟ್ಟಿದ್ದ ಸ್ಯಾಂಡ್ ಪೇಪರ್?
ಇದೇ ವಿಡಿಯೋ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಈ ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವೇಗಿ ಖಲೀಲ್ ಅಹ್ಮದ್ ರುತುರಾಜ್ ಗೆ ಸ್ಯಾಂಡ್ ಪೇಪರ್ ನೀಡಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಸ್ಯಾಂಡ್ ಪೇಪರ್ ಅನ್ನು ಚೆಂಡಿಗೆ ಉಜ್ಜುವುದರಿಂದ ಚೆಂಡು ಬೌಲರ್ ಗಳಿಗೆ ನೆರವಾಗುತ್ತದೆ. ವೇಗಿಗಳು ಚೆಂಡು ಸ್ವಿಂಗ್ ಮಾಡಲು ಇದು ನೆರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಆಸಿಸ್ ಆಟಗಾರರ ನಿಷೇಧ
ಇದೇ ಸ್ಯಾಂಡ್ ಪೇಪರ್ ಹಗರಣದಿಂದಾಗಿ ಆಸ್ಟ್ರೇಲಿಯಾದ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪ ನಾಯಕ ಡೇವಿಡ್ ವಾರ್ನರ್, ವೇಗಿ ಕ್ಯಾಮೆರಾನ್ ಬ್ಯಾಂಕ್ರಾಫ್ಟ್ ನಿಷೇಧ ಶಿಕ್ಷೆಗೊಳಗಾಗಿದ್ದರು.
ಫಿಕ್ಸಿಂಗ್ ಆರೋಪದಡಿ ಬ್ಯಾನ್ ಆಗಿದ್ದ ಚೆನ್ನೈ
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಇದೇ ಫಿಕ್ಸಿಂಗ್ ಆರೋಪದಡಿಯಲ್ಲಿ 2 ವರ್ಷಗಳ ಕಾಲ ನಿಷೇಧ ಎದುರಿಸಿತ್ತು. ಇದೀಗ ಮತ್ತೆ ಇದೇ ಚೆನ್ನೈ ತಂಡದ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ಇನ್ನು ಚೆನ್ನೈ ಫ್ರಾಂಚೈಸಿ ವತಿಯಿಂದ ಸ್ಪಷ್ಟನೆ ಬಂದಿಲ್ಲ.