ಮುಂಬೈ: 2008ರ ಚೊಚ್ಚಲ ಐಪಿಎಲ್ ಟೂರ್ನಿಯ ವೇಳೆ ನಡೆದಿದ್ದ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ (Harbhajan Singh) ಭಾವುಕರಾಗಿದ್ದು, ಮತ್ತೆ ಮಾಜಿ ಆಟಗಾರ ಶ್ರೀಶಾಂತ್ ಕ್ಷಮೆ ಕೋರಿದ್ದಾರೆ.
ಹೌದು.. 2008ರಲ್ಲಿ ಆರಂಭವಾದ ಐಪಿಎಲ್ ಟೂರ್ನಿ ಜಗತ್ತಿನ ಅತೀ ದೊಡ್ಡ ಟಿ20 ಲೀಗ್ ಎಂಬ ಖ್ಯಾತಿಯೊಂದಿಗೇ ಅದ್ಧೂರಿಯಾಗಿ ಆರಂಭವಾಗಿತ್ತು. ಅಂತೆಯೇ ಆ ಟೂರ್ನಿಯಲ್ಲಿ ಸಾಕಷ್ಟು ವಿವಾದಗಳು ಕೂಡ ತೀವ್ರ ಸುದ್ದಿಗೆ ಗ್ರಾಸವಾಗಿದ್ದವು.
ಪ್ರಮುಖವಾಗಿ ಅಂದು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಹರ್ಭಜನ್ ಸಿಂಗ್ ಮತ್ತು ಕಿಂಗ್ಸ್ ಎಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದ ಎಸ್ ಶ್ರೀಶಾಂತ್ ನಡುವಿನ ಕಪಾಳ ಮೋಕ್ಷ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಅಂದು ಭಜ್ಜಿಯಿಂದ ಏಟು ತಿಂದ ಶ್ರೀಶಾಂತ್ ಮೈದಾನದಲ್ಲೇ ಅಳುತ್ತಾ ದೊಡ್ಡ ಸುದ್ದಿಯಾಗಿದ್ದರು. ಶ್ರೀಶಾಂತ್ ಅಳುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಬಳಿಕ ಐಪಿಎಲ್ ಗವರ್ನಿಂಗ್ ಬಾಡಿ ಭಜ್ಜಿ ವಿರುದ್ಧ ಕ್ರಮ ಕೈಗೊಂಡು ಭಜ್ಜಿಯನ್ನು ಇಡೀ ಟೂರ್ನಿಯಿಂದ ನಿಷೇಧಿಸಿತ್ತು. ಬಳಿಕ ಈ ವಿವಾದ ತಣ್ಣಗಾಗಿತ್ತು. ಇದೀಗ ಬರೊಬ್ಬರಿ 18 ವರ್ಷಗಳ ಬಳಿಕ ಮತ್ತೆ ಈ ಪ್ರಕರಣ ಸುದ್ದಿಗೆ ಗ್ರಾಸವಾಗಿದೆ.
ಮತ್ತೆ ಕ್ಷಮೆ ಕೋರಿದ ಭಜ್ಜಿ
ಇನ್ನು ಅಂದು ನಡೆದಿದ್ದ ಘಟನೆ ಇಂದಿಗೂ ಹರ್ಭಜನ್ ಸಿಂಗ್ ರನ್ನು ಕಾಡುತ್ತಿದ್ದು, ಅಭಿಮಾನಿಯೊಬ್ಬರು ಅಂದಿನ ವಿಡಿಯೋ ಪೋಸ್ಚ್ ಮಾಡಿ ಆ ಕುರಿತು ಭಜ್ಜಿ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಭಜ್ಜಿ, 'slapgate' ಪ್ರಕರಣಕ್ಕೆ ಸಂಬಂಧಿಸಿದಂತೆ ಭಜ್ಜಿ ಮತ್ತೆ ಶ್ರೀಶಾಂತ್ ಗೆ ಕ್ಷಣೆ ಕೋರಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಭಜ್ಜಿ, 'ಇದು ಸರಿಯಲ್ಲ ಸಹೋದರ. ಇದು ನನ್ನ ತಪ್ಪು. ನಾನು ಇದನ್ನು ಮಾಡಬಾರದಿತ್ತು. ಆದರೆ ತಪ್ಪು ನಡೆದು ಹೋಗಿದೆ. ನಾನು ಕೂಡ ಮನುಷ್ಯನೇ.. ದೇವರಲ್ಲ.. '' ಎಂದು ಹೇಳಿದ್ದಾರೆ.
ಕ್ಷಮೆ ಯಾಚನೆ ಮೊದಲೇನಲ್ಲ
ಇನ್ನು ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಭಜನ್ ಸಿಂಗ್ ಕ್ಷಮೆ ಕೇಳುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದೆ ನಿಷೇಧ ಶಿಕ್ಷೆಯಿಂದ ಮರಳಿ ತಂಡಕ್ಕೆ ಬಂದಾಗ ಶ್ರೀಶಾಂತ್ ರನ್ನು ಉದ್ದೇಶಿಸಿ ಭಜ್ಜಿ ಕ್ಷಮೆ ಕೋರಿದ್ದಾರೆ. ಶ್ರೀಶಾಂತ್ ಕೂಡ ಕ್ಷಮಿಸಿ ಅವರ ಒಟ್ಟಿಗೆ ಆಡಿದ್ದಾರೆ. ಈಗ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.