ಗಾಯದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಟೂರ್ನಿಯಿಂದ ಕನ್ನಡಿಗ ಸ್ಮರಣ್ ರವಿಚಂದ್ರನ್ ಹೊರಬಿದ್ದಿದ್ದು, ಅವರ ಬದಲಿಗೆ ಉಳಿದ ಪಂದ್ಯಗಳಿಗೆ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಹರ್ಷ್ ದುಬೆ ಅವರನ್ನು ಕರೆತಂದಿದೆ. ಆಲ್‌ರೌಂಡರ್ ಆಗಿರುವ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುವ ದುಬೆ, 30 ಲಕ್ಷ ರೂ. ಗೆ SRHಗೆ ಸೇರ್ಪಡೆಗೊಂಡಿದ್ದಾರೆ.
ಹರ್ಷ್ ದುಬೆ ಅವರು 16 ಟಿ20, 20 ಲಿಸ್ಟ್ ಎ ಮತ್ತು 18 ಪ್ರಥಮ ದರ್ಜೆ ಪಂದ್ಯಗಳಿಂದ 127 ವಿಕೆಟ್‌ಗಳು ಮತ್ತು 941 ರನ್‌ಗಳನ್ನು ಗಳಿಸಿದ್ದಾರೆ. ವಿದರ್ಭ ಪರವಾಗಿ 69 ವಿಕೆಟ್‌ಗಳು ಮತ್ತು 476 ರನ್‌ಗಳನ್ನು ಗಳಿಸಿದ್ದಕ್ಕಾಗಿ, ಎಡಗೈ ಸ್ಪಿನ್ ಆಲ್‌ರೌಂಡರ್ ದುಬೆ 2024/25ರ ರಣಜಿ ಟ್ರೋಫಿ ಗೆದ್ದ ವೇಳೆ ಪ್ಲೇಯರ್ ಆಫ್‌ದ ಟೂರ್ನಮೆಂಟ್ ಪ್ರಶಸ್ತಿ ಗೆದ್ದಿದ್ದರು.
ಐಪಿಎಲ್ 2025ಕ್ಕೂ ಮುನ್ನ ದುಬೆ ರಾಜಸ್ಥಾನ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನಲ್ಲಿ ಟ್ರಯಲ್ಸ್‌ನ ಭಾಗವಾಗಿದ್ದರು.
ಸ್ಮರಣ್ ರವಿಚಂದ್ರನ್ ಅವರು ಗಾಯಗೊಂಡ ಆಡಂ ಝಂಪಾ ಅವರ ಬದಲಿ ಆಟಗಾರನಾಗಿ ಕಳೆದ ತಿಂಗಳು ಮೂಲ ಬೆಲೆ 30 ಲಕ್ಷ ರೂಪಾಯಿಗೆ ಎಸ್‌ಆರ್‌ಎಚ್ SRH ಸೇರಿಕೊಂಡಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಪರ ಆಡುವ ಸ್ಮರಣ್, ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಪಂಜಾಬ್ ವಿರುದ್ಧ ದ್ವಿಶತಕ ಸೇರಿದಂತೆ 64.50 ಸರಾಸರಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
2024ರಲ್ಲಿ ಪದಾರ್ಪಣೆ ಮಾಡಿದ ನಂತರ ಅವರು 10 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದಾರೆ. ಎರಡು ಶತಕಗಳೊಂದಿಗೆ, ಆರು ಟಿ20 ಪಂದ್ಯಗಳಲ್ಲಿ 170 ಸ್ಟ್ರೈಕ್ ರೇಟ್‌ನಲ್ಲಿ 170 ರನ್ ಗಳಿಸಿದ್ದಾರೆ. 2024-25ರ ವಿಜಯ್ ಹಜಾರೆ ಟ್ರೋಫಿಯ ಸಂದರ್ಭದಲ್ಲೂ ಸ್ಮರಣ್, ಏಳು ಇನಿಂಗ್ಸ್‌ಗಳಲ್ಲಿ 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದಾರೆ. ಫೈನಲ್‌ನಲ್ಲಿ ಅವರು 92 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ಕರ್ನಾಟಕ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಸಹಾಯ ಮಾಡಿದರು.
ಆಡಿರುವ 11 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆಲುವು ಸಾಧಿಸುವ ಮೂಲಕ SRH ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸೋಮವಾರ ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ.