ಲಕ್ನೋ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್‌ನಲ್ಲಿ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಎದುರು ನೋಡುತ್ತಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು ಗೆದ್ದೇ ಗೆಲ್ಲುವ ತವಕದಲ್ಲಿದೆ. ಶುಕ್ರವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (2025) ರಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಗೆಲುವಿಗಾಗಿ ಸೆಣಸಾಟ ನಡೆಸಲಿವೆ.
ಈ ಆವೃತ್ತಿಯ ಆರಂಭದಿಂದಲೂ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದು, ಈ ಪಂದ್ಯದಲ್ಲಿ ಮತ್ತಷ್ಟು ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ಎಸ್‌ಜಿ ಆಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. LSG ತಂಡ ಉಳಿದ ಮೂರು ಪಂದ್ಯಗಳಲ್ಲಿ ಮೂರಕ್ಕೆ ಮೂರನ್ನು ಗೆದ್ದರೆ ಮಾತ್ರ 16 ಅಂಕಗಳನ್ನು ಗಳಿಸಬಹುದು.
ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ತಂಡಕ್ಕೆ 18 ಅಂಕಗಳು ಬೇಕಾಗಿದ್ದು, ಆಡಿರುವ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿರುವ ಆರ್‌ಸಿಬಿ ಸದ್ಯ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ, RCB ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರಲಿದೆ.
ಈ ಬಾರಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡ ಪಂತ್, ಈ ಆವೃತ್ತಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ. 99.92ರ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ. ಎಲ್‌ಎಸ್‌ಜಿ ತಂಡವು ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಮ್ ಮತ್ತು ನಿಕೋಲಸ್ ಪೂರನ್ ಸೇರಿದಂತೆ ತಮ್ಮ ಅಗ್ರ ಮೂವರು ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಪಂದ್ಯ ಗೆಲ್ಲಬೇಕಾದರೆ ಎಲ್ಲರ ಬ್ಯಾಟ್‌ನಿಂದಲೂ ರನ್ ಗಳಿಸುವ ಅನಿವಾರ್ಯತೆ ಇದೆ. ಬೌಲಿಂಗ್ ವಿಭಾಗದಲ್ಲಿಯೂ ಎಲ್ಎಸ್‌ಜಿ ಸಾಕಷ್ಟು ಸುಧಾರಣೆ ಕಾಣಬೇಕಿದೆ.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಮಯಾಂಕ್ ಯಾದವ್ ತಂಡಕ್ಕೆ ಮರಳಿದ್ದು, ದುಬಾರಿಯಾಗಿದ್ದಾರೆ. ತಂಡದ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಕೂಡ ಸಾಕಷ್ಟು ನಿರೀಕ್ಷಿತ ಮಟ್ಟದಲ್ಲಿಲ್ಲ.
ಇತಿಹಾಸ ಸೃಷ್ಟಿಗೆ ಆರ್‌ಸಿಬಿ ಸಜ್ಜು
ಈ ಆವೃತ್ತಿಯಲ್ಲಿ ಈಗಾಗಲೇ ತವರಿನ ಹೊರಗೆ ಆಡಿರುವ 6 ಪಂದ್ಯಗಳಲ್ಲೂ ಆರ್‌ಸಿಬಿ ಗೆಲುವು ಸಾಧಿಸಿದೆ. ಇದೀಗ ತವರಿನ ಹೊರಗೆ 7ನೇ ಪಂದ್ಯವನ್ನು ಆಡಲು ಸಜ್ಜಾಗಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ RCB ಇತಿಹಾಸ ಸೃಷ್ಟಿಸಲಿದೆ. ಈವರೆಗೆ ಯಾವ ತಂಡಗಳು ಕೂಡ ತವರಿನಿಂದ ಹೊರಗೆ ಆಡಿರುವ ಎಲ್ಲಾ 7 ಪಂದ್ಯಗಳನ್ನು ಗೆದ್ದಿಲ್ಲ. ಒಂದು ವೇಳೆ ಎಲ್ಎಸ್‌ಜಿ ವಿರುದ್ಧ ಪಂದ್ಯ ಗೆದ್ದರೆ, ಆರ್‌ಸಿಬಿ ತವರಿನಿಂದ ಹೊರಗೆ ಆಡಿರುವ 7ಕ್ಕೆ 7 ಪಂದ್ಯಗಳನ್ನೂ ಗೆದ್ದಂತಾಗಲಿದ್ದು, ಹೊಸ ಇತಿಹಾಸ ಸೃಷ್ಟಿಯಾಗಲಿದೆ.