ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇಲ್ಲಿಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಮೆಗಾ ಹರಾಜಿನಲ್ಲಿ ತಂಡವನ್ನು ಕಟ್ಟಿದ ಬಳಿಕ RCB ಲೀಗ್ ಹಂತದಲ್ಲಿ ಮೊದಲ 11 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಗೆದ್ದಿದೆ ಮತ್ತು ಪ್ಲೇಆಫ್ ತಲುಪಲು ಇನ್ನೊಂದು ಹೆಜ್ಜೆ ದೂರವಿದೆ. ತಂಡದ ಸಕಾರಾತ್ಮಕ ಆರಂಭವು 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿ RCB ಈ ಬಾರಿ ಪ್ರತಿಷ್ಠಿತ IPL ಟ್ರೋಫಿಯನ್ನು ಎತ್ತಿಹಿಡಿಯುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಭಾರತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನ ಮಾಜಿ ತಾರೆ ಸುರೇಶ್ ರೈನಾ ಕೂಡ ಇದು ನಿಜವಾಗಬಹುದು ಎಂದಿದ್ದಾರೆ.
'ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷ ಬೇರೆ ರೀತಿಯಲ್ಲಿಯೇ ಲೀಗ್‌ನಲ್ಲಿ ಆಡುತ್ತಿರುವುದರಿಂದ (ಆರ್‌ಸಿಬಿ ಐಪಿಎಲ್ 2025 ಗೆಲ್ಲುವ) ಬಲವಾದ ಅವಕಾಶಗಳಿವೆ. ಅವರ ಬೌಲಿಂಗ್ ಘಟಕವು ಚುರುಕಾಗಿದೆ. ಹೊಸ ನಾಯಕ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎರಡು ಬಾರಿ ಸೋಲಿಸುವಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಒಮ್ಮೆ ಚೆನ್ನೈನಲ್ಲಿ ಮತ್ತು ಮತ್ತೊಮ್ಮೆ ತವರಿನಲ್ಲಿ. ಇದು ಬಹಳಷ್ಟು ಹೇಳುತ್ತದೆ' ಎಂದು ರೈನಾ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದರು.
'ಡ್ರೆಸ್ಸಿಂಗ್ ರೂಮ್ ಸಕಾರಾತ್ಮಕವಾಗಿದೆ ಮತ್ತು ಇವು ಎಲ್ಲ ರೀತಿಯಲ್ಲಿಯೂ ಮುಂದುವರಿಯಬಲ್ಲ ತಂಡದ ಲಕ್ಷಣಗಳಾಗಿವೆ. ಹೌದು, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಇದು ಅಂತಿಮವಾಗಿ ವಿರಾಟ್ 18 ವರ್ಷಗಳ ನಂತರ ಟ್ರೋಫಿಯನ್ನು ಎತ್ತಿಹಿಡಿಯುವ ವರ್ಷವಾಗಿರಬಹುದು' ಎಂದು ರೈನಾ ಹೇಳಿದರು.
ಆರ್‌ಸಿಬಿಯ ಅದ್ಭುತ ಆರಂಭಕ್ಕೆ ಹಲವಾರು ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ಕೊಡುಗೆ ನೀಡಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತು ಯಶ್ ದಯಾಳ್ ಅವರಂತಹ ಆಟಗಾರರು ನಿರ್ಣಾಯಕ ಕೊಡುಗೆಗಳನ್ನು ನೀಡಿದ್ದಾರೆ. ಕೃನಾಲ್ ಪಾಂಡ್ಯ ಲೀಗ್‌ನಲ್ಲಿ ಅತ್ಯುತ್ತಮ ಆಲ್‌ರೌಂಡರ್ ಎಂದು ಹೇಳಬಹುದು. ನಾಯಕತ್ವದ ದೊಡ್ಡ ಸವಾಲಿನ ಹೊರತಾಗಿಯೂ ರಜತ್ ಪಾಟೀದಾರ್ ಕೂಡ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಜೇಕಬ್ ಬೆಥೆಲ್ ಅವರಂತಹ ಯುವ ಆಟಗಾರರು ಮತ್ತು ರೊಮಾರಿಯೊ ಶೆಫರ್ಡ್‌ನಂತಹ ವಿದೇಶಿ ಆಟಗಾರರು ಸಹ ವೈಯಕ್ತಿಕವಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಕಳೆದ 18 ವರ್ಷಗಳಿಂದಲೂ ಆರ್‌ಸಿಬಿ ಜೊತೆಗೆ ಇರುವ ವಿರಾಟ್ ಕೊಹ್ಲಿ ಕೂಡ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. ಕೊಹ್ಲಿ ಕಡಿಮೆ ಸ್ಕೋರಿಂಗ್ ರನ್ ಚೇಸಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಮಾತ್ರವಲ್ಲದೆ, ಕೆಲವು ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಜೊತೆಗೆ ತಂಡಕ್ಕೆ ಉತ್ತಮ ಆರಂಭವನ್ನೂ ನೀಡಿದ್ದಾರೆ. ಪರಿಣಾಮವಾಗಿ, ಈ ವರ್ಷ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ.