ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ 2025ರ ಫೈನಲ್ ಪ್ರವೇಶಿಸಿದ್ದು, ಈ ಫೈನಲ್ ಪಂದ್ಯ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ಕ್ರಿಕೆಟ್ ತಂಡಕ್ಕೆ ದಾಖಲೆಯ ಬಹುಮಾನದ ಮೊತ್ತ ನೀಡಲಿದೆ ಎಂದು ಹೇಳಲಾಗಿದೆ.
ಇದೇ ಭಾನುವಾರ (ನ. 2) ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿದೆ. ಈ ಬಾರಿ ಭಾರತ ತಂಡ ಚಾಂಪಿಯನ್ ಆದರೆ ಆ ತಂಡಕ್ಕೆ ಸಿಗುವ ಬಹುಮಾನದ ಕುರಿತು ಇದೀಗ ಭಾರಿ ಸುದ್ದಿಯಾಗುತ್ತಿದೆ.
ಮೂಲಗಳ ಪ್ರಕಾರ ಬಿಸಿಸಿಐ ಭಾರತ ಮಹಿಳಾ ತಂಡ ವಿಶ್ವಕಪ್ ಗೆದ್ದರೆ ತಂಡಕ್ಕೆ ದಾಖಲೆಯ ಮೊತ್ತದ ಬಹುಮಾನ ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.
ಬಿಸಿಸಿಐನ ಕೆಲವು ಆಂತರಿಕ ಮೂಲಗಳ ಪ್ರಕಾರ, ಭಾರತ ತಂಡ ಚಾಂಪಿಯನ್ ಆದರೆ, ಬರೊಬ್ಬರಿ 125 ಕೋಟಿ ರೂಪಾಯಿ ಬಹುಮಾನ ಪಡೆಯುವ ಸಾಧ್ಯತೆ ಇದೆ. ಕಳೆದ ವರ್ಷ ಪುರುಷರ ಟಿ20 ವಿಶ್ವಕಪ್ ಗೆದ್ದಿದ್ದ ತಂಡಕ್ಕೆ ನೀಡಿದ್ದಷ್ಟೇ ಮೊತ್ತವನ್ನು ಮಹಿಳಾ ತಂಡಕ್ಕೂ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ. ಇದು 'ಸಮಾನ ವೇತನ' ನೀತಿಯ ಭಾಗವಾಗಿದೆ ಎಂದು ಹೇಳಲಾಗಿದೆ.
ಭಾನುವಾರ ನವಿ ಮುಂಬೈನಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಬಿಸಿಸಿಐ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡಕ್ಕೆ ಭರ್ಜರಿ ನಗದು ಬಹುಮಾನ ನೀಡಲು ಸಿದ್ಧತೆ ನಡೆಸಿದೆ. ಈ ಮೊತ್ತವು ಕಳೆದ ವರ್ಷ ಪುರುಷರ ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ನೀಡಿದ್ದ 125 ಕೋಟಿ ರೂಪಾಯಿಗೆ ಸಮನಾಗಿರಲಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಅಕ್ಟೋಬರ್ 30ರಂದು ನಡೆದಿದ್ದ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಫೈನಲ್ ಗೆ ಕಾಲಿಟ್ಟಿತು.
ಕಳೆದ ವರ್ಷ, ಅಮೆರಿಕಾದಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಫೈನಲ್‌ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿತ್ತು. ಆಗ, ಆ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಒಟ್ಟಾರೆಯಾಗಿ 125 ಕೋಟಿ ರೂಪಾಯಿ ಬಹುಮಾನವಾಗಿ ನೀಡಲಾಗಿತ್ತು. ಅಷ್ಟೇ ಬಹುಮಾನವನ್ನು ಮಹಿಳಾ ತಂಡಕ್ಕೂ ಬಹುಮಾನ ನೀಡುವ ಬಗ್ಗೆ ಬಿಸಿಸಿಐನಲ್ಲಿ ಚರ್ಚೆ ನಡೆಯುತ್ತಿದೆ.
ಸಮಾನವೇತನ
"ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಬೆಂಬಲಿಸುತ್ತದೆ. ಹಾಗಾಗಿ, ನಮ್ಮ ಹುಡುಗಿಯರು ವಿಶ್ವಕಪ್ ಗೆದ್ದರೆ, ಪುರುಷರ ವಿಶ್ವಕಪ್ ಗೆದ್ದಾಗ ನೀಡಿದ ಬಹುಮಾನಕ್ಕಿಂತ ಕಡಿಮೆ ಮೊತ್ತವನ್ನು ನೀಡುವುದಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವರು ಕಪ್ ಗೆಲ್ಲುವ ಮುನ್ನವೇ ಇಂತಹ ಘೋಷಣೆ ಮಾಡುವುದು ಸರಿಯಲ್ಲ," ಎಂದು ಬಿಸಿಸಿಐ ಮೂಲವೊಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದೆ ಎಂದು ವರದಿಯಾಗಿದೆ.