ಮುಂಬೈ: 2026ರ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಕಲ ಸಿದ್ಧತೆ ನಡೆಸಿದ್ದು, ಟೂರ್ನಿ ಆಯೋಜನೆಗೆ ದೇಶದ ಐದು ನಗರಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಹೌದು.. ಭಾರತವು ಶ್ರೀಲಂಕಾ ಜೊತೆಗೆ 2026 ರ ಪುರುಷರ ಟಿ 20 ವಿಶ್ವಕಪ್ ಅನ್ನು ಸಹ-ಆತಿಥ್ಯ ವಹಿಸಲು ಸಜ್ಜಾಗಿದೆ.
2025 ರ ಮಹಿಳಾ ಏಕದಿನ ವಿಶ್ವಕಪ್‌ನಂತೆಯೇ, ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ.
ಅದರಂತೆ ಪಾಕಿಸ್ತಾನದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಸಲಿದೆ. ಪಾಕಿಸ್ತಾನ ತಂಡ ಶ್ರೀಲಂಕಾದಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಆಡಲಿದೆ. ಈ ಆಕರ್ಷಕ ಟಿ 20 ಪಂದ್ಯಾವಳಿ ಮುಂದಿನ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಡುವೆ ನಡೆಯುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಂದ್ಯಾವಳಿಗಾಗಿ ಪ್ರಸ್ತಾವಿತ ವೇಳಾಪಟ್ಟಿಯನ್ನು ಐಸಿಸಿಗೆ ಕಳುಹಿಸಿದೆ. ಅದರಂತೆ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಈ ಬಹು ನಿರೀಕ್ಷಿತ ಟೂರ್ನಿಗಾಗಿ ಬಿಸಿಸಿಐ ಐದು ನಗರಗಳ ಪ್ರಸ್ತಾವನೆ ಮಾಡಿದೆ.
ಎಲ್ಲಾ ಪಂದ್ಯಗಳನ್ನು ಟೈಯರ್ 1 ನಗರಗಳಲ್ಲಿ ನಡೆಸುವ ನಿರೀಕ್ಷೆಯಿದ್ದು, ಫೈನಲ್ ಪಂದ್ಯವು ಗುಜರಾತ್ ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆಯಿದೆ.
ಬಿಸಿಸಿಐ ಮೂಲಗಳ ಪ್ರಕಾರ ಟಿ20 ವಿಶ್ವಕಪ್ ಗಾಗಿ ಶಾರ್ಟ್‌ಲಿಸ್ಟ್ ಮಾಡಲಾದ ನಗರಗಳ ಪೈಕಿ ಭಾರತದ ಅಹ್ಮದಾಬಾದ್, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈ ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತೀ ಮೈದಾನದಲ್ಲೂ ತಲಾ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಹ್ಮದಾಬಾದ್ ಈ ಹಿಂದೆ ಹಲವಾರು ಐಪಿಎಲ್ ಫೈನಲ್‌ಗಳನ್ನು ಹಾಗೂ 2023 ರ ಪುರುಷರ ಏಕದಿನ ವಿಶ್ವಕಪ್ ಫೈನಲ್ ಅನ್ನು ಆಯೋಜಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಂತೆಯೇ ಪಾಕಿಸ್ತಾನದ ವಿಷಯದಲ್ಲಿ, ಐಸಿಸಿ ಶ್ರೀಲಂಕಾದ ಒಂದು ನಗರವನ್ನು ತಮ್ಮ ಎಲ್ಲಾ ಪಂದ್ಯಗಳನ್ನು ಆಯೋಜಿಸಲು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.