ಬೆಂಗಳೂರು: ಹಾಲಿ ಐಪಿಎಲ್ ಚಾಂಪಿಯನ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರಾಟ ವಿಚಾರ ಕೊನೆಗೂ ನಿರ್ಣಾಯಕ ಹಂತ ತಲುಪಿದೆ.
ಹೌದು.. ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ಆರ್ ಸಿಬಿ ತಂಡವನ್ನು ಮಾರಾಟ ಮಾಡುವ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಮೂಲಗಳ ಪ್ರಕಾರ ಹಾಲಿ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ ತಂಡವನ್ನು ಮಾರಾಟ ಮಾಡಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.
ಜಾಗತಿಕ ಪಾನೀಯ ದೈತ್ಯ ಡಿಯಾಜಿಯೊದ ಭಾರತೀಯ ಅಂಗ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ (RCB) "ಹೂಡಿಕೆಯ ಕಾರ್ಯತಂತ್ರದ ವಿಮರ್ಶೆ"ಯನ್ನು ಪ್ರಾರಂಭಿಸಿದೆ ಎಂದು ಮುಂಬೈ ಸ್ಟಾಕ್ ಎಕ್ಸ್ಚೇಂಜ್ ಗೆ ತಿಳಿಸಿದೆ.
ಯುನೈಟೆಡ್ ಸ್ಪಿರಿಟ್ಸ್ ಸಿಇಒ ಪ್ರವೀಣ್ ಸೋಮೇಶ್ವರ್ ಅವರು ಬುಧವಾರ ಬರೆದಿರುವ ಪತ್ರದಲ್ಲಿ ಇದು "ಮೌಲ್ಯಯುತ ಮತ್ತು ಕಾರ್ಯತಂತ್ರದ ಆಸ್ತಿಯಾಗಿದೆ". ಆದರೆ ಅದು "ನಮ್ಮ ಆಲ್ಕೋಬೆವ್ ವ್ಯವಹಾರಕ್ಕೆ ಮುಖ್ಯವಲ್ಲ" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
"ಈ ಹಂತವು USL ಮತ್ತು ಡಿಯಾಜಿಯೊ ತನ್ನ ಭಾರತದ ಉದ್ಯಮ ಪೋರ್ಟ್ಫೋಲಿಯೊವನ್ನು ಪರಿಶೀಲಿಸುವುದನ್ನು ಮುಂದುವರಿಸುವ ಬದ್ಧತೆಯನ್ನು ಬಲಪಡಿಸುತ್ತದೆ" ಎಂದು ಅವರು RCB ಯ "ಉತ್ತಮ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು" ಹೇಳಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ ವೇಳೆಗೆ ಪರಿಶೀಲನಾ ಪ್ರಕ್ರಿಯೆ ಮುಕ್ತಾಯ
ಇನ್ನು ಆರ್ ಸಿಬಿ ಮಹಿಳಾ ಮತ್ತು ಪುರುಷರ ತಂಡಗಳ ಮಾಲೀಕರಾದ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ. ಮಾರಾಟ ಮಾಡುವ ಕುರಿತ ಪರಿಶೀಲನಾ ಪ್ರಕ್ರಿಯೆ ಮುಂದಿನ ವರ್ಷ ಮಾರ್ಚ್ ವೇಳೆಗೆ ಮುಕ್ತಾಯಗೊಳಿಸುವ ನಿರೀಕ್ಷೆಯಿದೆ.
ಬ್ಲೂಮ್‌ಬರ್ಗ್ ನ್ಯೂಸ್ ಈ ಬಗ್ಗೆ ವರದಿ ಮಾಡಿ, ಶೀಘ್ರದಲ್ಲೇ ಆರ್ ಸಿಬಿ ಮಾಲೀಕರು "ಕ್ಲಬ್‌ನ ಒಂದು ಭಾಗವನ್ನು ಅಥವಾ ಎಲ್ಲವನ್ನೂ ಮಾರಾಟ ಮಾಡುವ ಸಾಧ್ಯತೆಗಳಿದೆ. ಸುಮಾರು 2 ಬಿಲಿಯನ್ ಡಾಲರ್ ಮೌಲ್ಯವನ್ನು ಬಯಸಬಹುದು" ಎಂದು ವರದಿ ಮಾಡಿತ್ತು.
2008ರಲ್ಲಿ ಆರಂಭವಾಗಿದ್ದ ಐಪಿಎಲ್ ಟೂರ್ನಿ ಹಣದ ಹೊಳೆಯನ್ನೇ ಹರಿಸಿದ್ದು, ಆರ್‌ಸಿಬಿ ಕಳೆದ ಜೂನ್‌ನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಅಹ್ಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದ ನಂತರ ಬೆಂಗಳೂರಿನಲ್ಲಿ ನಡೆದ ತಂಡದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿತ್ತು. ತಮ್ಮ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ವಿಜಯಶಾಲಿ ತಂಡದ ಸದಸ್ಯರನ್ನು ಸ್ವಾಗತಿಸಲು ಲಕ್ಷಾಂತರ ಅಭಿಮಾನಿಗಳು ನಗರದ ಬೀದಿಗಳಲ್ಲಿ ಜಮಾಯಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಅಂತೆಯೇ 50 ಮಂದಿ ಗಾಯಗೊಂಡಿದ್ದರು.