

ಪುತ್ತೂರು: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು ವರ್ಚುಯಲ್ ಆಗಿ ಕಾಂಗ್ರೆಸ್ ಭವನಗಳಿಗೆ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ದಿನಾಂಕ ತಿಳಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪುತ್ತೂರಿನಲ್ಲಿ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಮಾಧ್ಯಮಗಳಿಗೆ ಶುಕ್ರವಾರ ರಾತ್ರಿ ಪ್ರತಿಕ್ರಿಯೆ ನೀಡಿದರು.
"ರಾಜ್ಯದಾದ್ಯಂತ ಎಲ್ಲೆಲ್ಲಿ ಕಾಂಗ್ರೆಸ್ ಭವನಗಳಿಗೆ ನಿವೇಶನಗಳು ಸಿದ್ಧವಿದೆಯೋ ಅವರೆಲ್ಲರಿಗೂ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಸಂಬಂಧಪಟ್ಟವರಿಗೆ ತಿಳಿಸಿದ್ದೇನೆ. ಪವಿತ್ರವಾದ ದಿನದಂದು ಪುತ್ತೂರಿನ ಕಾಂಗ್ರೆಸ್ ಭವನಕ್ಕೆ ಶಿಲಾನ್ಯಾಸ ಮಾಡಿದ್ದೇನೆ" ಎಂದು ಹೇಳಿದರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆಯಲಿದೆ. ನಾವು ಜನರ ಅಭಿಲಾಷೆಗೆ ತಕ್ಕಂತೆ ಕೆಲಸ ಮಾಡಲಿದ್ದೇವೆ. ಪುತ್ತೂರು ಕ್ಷೇತ್ರವು ಸಹ ಬಹಳ ಅಭಿವೃದ್ಧಿಯಾಗಿದೆ. ಸಂಪತ್ಬರಿತವಾದ ಈ ಭಾಗ ಬೆಳೆಯಬೇಕು" ಎಂದರು.
"ಗ್ಯಾರಂಟಿ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದೆ. ಐದು ಗ್ಯಾರಂಟಿಗಳ ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದೆ. ಫೆ.13 ರಂದು 1 ಸಾವಿರ ದಿನ ತುಂಬಲಿದೆ. 14 ರಂದು ಹಾವೇರಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುವುದು" ಎಂದು ತಿಳಿಸಿದರು
ನೀವು ಶೀಘ್ರದಲ್ಲೇ ಮುಖ್ಯಮಂತ್ರಿಯಾಗುವಿರಿ ಎಂದು ಹಲವರು ಅಭಿಲಾಷೆ ವ್ಯಕ್ತಪಡಿದ್ದರ ಬಗ್ಗೆ ಕೇಳಿದಾಗ, "ಆಸೆ ಪಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ಅವರ ಪ್ರಾರ್ಥನೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ನೋಡೋಣ" ಎಂದು ಪ್ರತಿಕ್ರಿಯಿಸಿದರು.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆ’ʼ ಎಂದರು.
Advertisement