ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ 5ನೇ ಟಿ20 ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದು ಕೂದಲೆಳೆ ಅಂತರದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮಿಸ್ ಮಾಡಿಕೊಂಡಿದ್ದಾರೆ.
ಹೌದು.. ಇಂದು ಬ್ರಿಸ್ಬೇನ್ ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 5ನೇ ಟಿ20 ಪಂದ್ಯ ಮಳೆಗಾಹುತಿಯಾಗಿದ್ದು, ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಪರಿಣಾಮ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಇನ್ನು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 4.5 ಓವರ್ ನಲ್ಲಿ 52 ರನ್ ಗಳಿಸಿತ್ತು. ಈ ಪೈಕಿ ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 23 ರನ್ ಗಳಿಸಿದರೆ, ಶುಭ್ ಮನ್ ಗಿಲ್ 16 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಗಳಿಸಿದರು. ಈ ಹಂತದಲ್ಲಿ ಮಳೆ ಬಂದು ಪಂದ್ಯ ಸ್ಥಗಿತವಾಗಿತ್ತು.
ಅಭಿಷೇಕ್ ಶರ್ಮಾ ವಿಶ್ವದಾಖಲೆ
ಈ ಪಂದ್ಯದ ಮೂಲಕ ಅಭಿಷೇಕ್ ಶರ್ಮಾ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಅಭಿಷೇಕ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1,000 ರನ್ ಮೈಲಿಗಲ್ಲು ತಲುಪಿ ಇತಿಹಾಸ ನಿರ್ಮಿಸಿದ್ದಾರೆ. ಅಂತೆಯೇ ಒಂದು ದೇಶದ ಪರ ವೇಗವಾಗಿ (ಎಸೆತಗಳ ಲೆಕ್ಕಾಚಾರ-528 ಎಸೆತ) ಮತ್ತು (ಪಂದ್ಯಗಳ ಲೆಕ್ಕಾಚಾರ) ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಆಸಿಸ್ ದೈತ್ಯನ ದಾಖಲೆ ಪತನ
ಈ ಹಿಂದೆ ಈ ದಾಖಲೆ ಆಸಿಸ್ ನ ಟಿಮ್ ಡೇವಿಡ್ ಹೆಸರಲ್ಲಿತ್ತು. ನವೆಂಬರ್ 2 ರಂದು ಹೋಬಾರ್ಟ್‌ನಲ್ಲಿ 38 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಟಿಮ್ ಡೇವಿಡ್ ಆಸ್ಟ್ರೇಲಿಯಾ ಪರ 569 ಎಸೆತಗಳಲ್ಲಿ 1,000 ರನ್ ಗಳಿಸಿದ್ದರು. ಅಂತೆಯೇ ಭಾರತದ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಈ ಹಿಂದೆ 573 ಎಸೆತಗಳಲ್ಲಿ ಸಾವಿರ ರನ್ ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು. ಇದೀಗ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ನ್ಯೂಜಿಲೆಂಡ್‌ನ ಫಿನ್ ಅಲೆನ್ (611 ಎಸೆತಗಳು) 4ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕೊಹ್ಲಿ ದಾಖಲೆ ಜಸ್ಟ್ ಮಿಸ್!
ಇದಲ್ಲದೆ, ಅಭಿಷೇಕ್ ಶರ್ಮಾ ಕೂದಲೆಳೆ ಅಂತರದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮಿಸ್ ಮಾಡಿಕೊಂಡಿದ್ದಾರೆ. ಕೊಹ್ಲಿ 29 ಪಂದ್ಯಗಳಿಂದ 27 ಇನ್ನಿಂಗ್ಸ್‌ಗಳಲ್ಲಿ 1,000 ರನ್‌ಗಳ ಕಲೆಹಾಕಿದ್ದರು. ಅವರ ದಾಖಲೆಯನ್ನು ಮುರಿಯಲು ಅಭಿಷೇಕ್ ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.
ಅಭಿಷೇಕ್ 28 ಇನ್ನಿಂಗ್ಸ್‌ಗಳಲ್ಲಿ ಈ ಸಾವಿರ ರನ್ ಮೈಲಿಗಲ್ಲನ್ನು ತಲುಪಿದ್ದಾರೆ. ಆದ್ದರಿಂದ, ಆಡಿದ ಪಂದ್ಯಗಳ ಲೆಕ್ಕಾಚಾರದಲ್ಲಿ ಟಿ20ಐಗಳಲ್ಲಿ 1000 ರನ್ ಮೈಲಿಗಲ್ಲನ್ನು ತಲುಪಿದ ಅತ್ಯಂತ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಅಭಿಷೇಕ್ ಶರ್ಮಾ ಪಾತ್ರರಾಗಿದ್ದಾರೆ.
ಟಿ20ಐನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ 1000 ರನ್ ಗಳಿಸಿದ ಭಾರತದ ಆಟಗಾರರು
27 ವಿರಾಟ್ ಕೊಹ್ಲಿ
28 ಅಭಿಷೇಕ್ ಶರ್ಮಾ
29 ಕೆಎಲ್ ರಾಹುಲ್
31 ಸೂರ್ಯಕುಮಾರ್ ಯಾದವ್
40 ರೋಹಿತ್ ಶರ್ಮಾ
ಎದುರಿಸಿದ ಎಸೆತಗಳ ವಿಷಯದಲ್ಲಿ ಅಭಿಷೇಕ್ ವೇಗವಾಗಿ 1,000 ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರೆ, ಮೈಲಿಗಲ್ಲು ತಲುಪಲು ಆಡಿದ ಕಡಿಮೆ ಪಂದ್ಯಗಳ ಲೆಕ್ಕಾಚಾರದಲ್ಲಿ ಈ ದಾಖಲೆಯನ್ನು ಇಂಗ್ಲೆಂಡ್‌ನ ಡೇವಿಡ್ ಮಲನ್ ಮತ್ತು ಜೆಕ್ ಗಣರಾಜ್ಯದ ಸಬಾವೂನ್ ಡೇವಿಜಿ ಜಂಟಿಯಾಗಿ ಹೊಂದಿದ್ದಾರೆ.
ಇಬ್ಬರೂ ತಮ್ಮ 24 ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಭಾರತದ ಸಂಜು ಸ್ಯಾಮ್ಸನ್ (995 ರನ್) ಮತ್ತು ತಿಲಕ್ ವರ್ಮಾ (991 ರನ್) ಕೂಡ ಟಿ20ಐ ಕ್ರಿಕೆಟ್‌ನಲ್ಲಿ 1,000 ರನ್ ಗಳಿಸುವ ಹೊಸ್ತಿಲಲ್ಲಿದ್ದಾರೆ.