ನಾಸಿಕ್: ರಣಜಿ ಟ್ರೋಫಿ 2025-26ರ ಟೂರ್ನಿಯಲ್ಲಿ ಕರ್ನಾಟಕ ತಂಡದ ಪ್ರಾಬಲ್ಯ ಮುಂದುವರೆದಿದ್ದು, ಮಹಾರಾಷ್ಟ್ರ ವಿರುದ್ಧ ಭಾರಿ ಮುನ್ನಡೆ ಸಾಧಿಸಿದೆ.
ನಾಸಿಕ್ ನ ಗಾಲ್ಫ್ ಕ್ಲಬ್ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿದ್ದು, ಆ ಮೂಲಕ 267 ರನ್ ಮುನ್ನಡೆ ಸಾಧಿಸಿದೆ.
ಕರ್ನಾಟಕ ಪರ 2ನೇ ಇನ್ನಿಂಗ್ಸ್ ನಲ್ಲಿ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿದ್ದು, ಅಭಿನವ್ ಮನೋಹರ್ ಅಜೇಯ 62 ರನ್ ಗಳಿಸಿದ್ದಾರೆ. 4ನೇ ದಿನದಾಟದ ಭೋಜನ ವಿರಾಮದ ವೇಳೆಗೆ 254 ರನ್ ಕಲೆಹಾಕಿದೆ.
ಮಯಾಂಕ್ ಅದ್ಭುತ ಬ್ಯಾಟಿಂಗ್
ಇನ್ನು ಈ ಪಂದ್ಯದಲ್ಲಿ ಕನ್ನಡಿಗ ಮಯಾಂಗ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದ್ದು, 249 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿ ಸಹಿತ 103 ರನ್ ಕಲೆಹಾಕಿ ಸಿದ್ದೇಶ್ ವೀರ್ ಬೌಲಿಂಗ್ ನಲ್ಲಿ ಔಟಾದರು. ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್ ನಲ್ಲೂ ಮಯಾಂಕ್ ಅಗರ್ವಾಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು.
ಮೊದಲ ಇನ್ನಿಂಗ್ಸ್ ನಲ್ಲಿ 181 ಎಸೆತ ಎದುರಿಸಿ 2 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 80 ರನ್ ಕಲೆಹಾಕಿದ್ದರು. ಮಯಾಂಕ್ ಮಾತ್ರವಲ್ಲದೇ ಮೊದಲ ಇನ್ನಿಂಗ್ಸ್ ನಲ್ಲಿ ಶ್ರೇಯಸ್ ಗೋಪಾಲ್ ಕೂಡ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. 162 ಎಸೆತಗಳನ್ನು ಎದುರಿಸಿದ್ದ ಶ್ರೇಯಸ್ ಗೋಪಾಲ್ 9 ಬೌಂಡರಿ ಸಹಿತ 71 ರನ್ ಕಲೆ ಹಾಕಿದ್ದರು.
ಅಂಕಪಟ್ಟಿಯಲ್ಲೂ ಅಗ್ರಸ್ಥಾನ
ಇನ್ನು ಕರ್ನಾಟಕ ತಂಡ ತನ್ನ ಅದ್ಭುತ ಪ್ರದರ್ಶನದ ಮೂಲಕ ಗ್ರೂಪ್ ಬಿವಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ತಾನಾಡಿರುವ 3 ಪಂದ್ಯಗಳ ಪೈಕಿ 1 ರಲ್ಲಿ ಗೆದ್ದಿರುವ ಕರ್ನಾಟಕ ಒಟ್ಟು 11 ಅಂಕ ಹಾಗೂ +1.595 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ.