ರಾವಲ್ಪಿಂಡಿ: ಇಸ್ಲಾಮಾಬಾದ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ನಂತರ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಮಧ್ಯಸ್ಥಿಕೆಯ ಮೇರೆಗೆ ಪ್ರವಾಸ ಮುಂದುವರಿಸಲು ಒಪ್ಪಿಕೊಂಡ ನಂತರ, ಸರ್ಕಾರವು ಶ್ರೀಲಂಕಾ ಕ್ರಿಕೆಟ್ ತಂಡದ ಭದ್ರತೆಯನ್ನು ಪಾಕಿಸ್ತಾನ ಮಿಲಿಟರಿ ಪಡೆಗಳಿಗೆ ಹಸ್ತಾಂತರಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥ ಮತ್ತು ಫೆಡರಲ್ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ, ಸದ್ಯ ಇಲ್ಲಿಗೆ ಭೇಟಿ ನೀಡುವ ಯಾವುದೇ ತಂಡಕ್ಕೆ ರಾಜ್ಯ ಮಟ್ಟದ ಭದ್ರತೆ ಒದಗಿಸಲಾಗುತ್ತದೆ. ಆದರೆ, ಶ್ರೀಲಂಕಾ ಕ್ರಿಕೆಟ್ ತಂಡದ ಭದ್ರತೆಯನ್ನು ಪೊಲೀಸರೊಂದಿಗೆ ಸೇನೆ ಮತ್ತು ರೇಂಜರ್‌ಗಳು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಗುರುವಾರ ರಾತ್ರಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಆಟಗಾರರನ್ನು ಕ್ರೀಡಾಂಗಣದಲ್ಲಿ ಭೇಟಿಯಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಖ್ವಿ, ಶ್ರೀಲಂಕಾ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯು ಪಾಕಿಸ್ತಾನ ಪ್ರವಾಸವನ್ನು ಮುಂದುವರಿಸಲು ನಿರ್ಧರಿಸುವ ಮೂಲಕ ಉತ್ತಮ ಬೆಂಬಲ ನೀಡಿವೆ ಎಂದು ಅವರು ಹೇಳಿದರು.
ಇಸ್ಲಾಮಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭದ್ರತಾ ಕಾಳಜಿಯಿಂದಾಗಿ ಕೆಲವು ಶ್ರೀಲಂಕಾದ ಆಟಗಾರರು ತವರಿಗೆ ಹಿಂದಿರುಗಲು ಬಯಸಿದ್ದರು. ಪಾಕಿಸ್ತಾನ ಮತ್ತು ಶ್ರೀಲಂಕಾ ನಾಯಕತ್ವದ ನಡುವಿನ ನಿರಂತರ ಸಂಪರ್ಕದ ಮೂಲಕ ತಂಡವು ಪ್ರವಾಸ ಮುಂದುವರಿಸುವಂತೆ ಮನವೊಲಿಸಲಾಯಿತು ಎಂದು ಅವರು ಹೇಳಿದರು.
ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮುನೀರ್ ಅವರು ಶ್ರೀಲಂಕಾದ ರಕ್ಷಣಾ ಸಚಿವೆ ಪ್ರಮಿತಾ ಬಂಡಾರ ತೆನ್ನಕೂನ್ ಮತ್ತು ಕಾರ್ಯದರ್ಶಿಯೊಂದಿಗೆ ಮಾತನಾಡಿ ತಂಡದ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಉಳಿಯಲು ನಿರ್ಧರಿಸಲು ಆಟಗಾರರು ತೋರಿಸಿದ ಧೈರ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ಅವರು ದೃಢಪಡಿಸಿದರು.
'ಶ್ರೀಲಂಕಾ ಆಟಗಾರರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ತಾವು ಅವರೊಂದಿಗೆ ದೀರ್ಘ ಸಭೆ ನಡೆಸಿದ್ದೇವೆ. ಅವರ ರಕ್ಷಣೆಯ ಹೊಣೆ ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿದೆ. ಅವರಿಗೆ ಹಲವಾರು ಕಳವಳಗಳಿದ್ದವು. ಆದರೆ, ನಾವು ಅವೆಲ್ಲವನ್ನೂ ನಿವಾರಿಸಲು ಪ್ರಯತ್ನಿಸಿದೆವು. ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ತಮ್ಮ ದೇಶದ ತಂಡದೊಂದಿಗೆ ಮಾತನಾಡಿ ಅವರನ್ನು ಮನವೊಲಿಸಿದರು' ಎಂದರು.
ರಾವಲ್ಪಿಂಡಿಯಲ್ಲಿ ಭದ್ರತಾ ಬೆದರಿಕೆಗಳ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಪಡೆದ ನಂತರ ನ್ಯೂಜಿಲೆಂಡ್ ತಂಡವು 2021ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದ ವೈಟ್ ಬಾಲ್ ಪ್ರವಾಸವನ್ನು ಕೈಬಿಟ್ಟಿತ್ತು.