ದೋಹಾ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025ನೇ ಸಾಲಿನ ಟ್ವೆಂಟಿ-20 ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ಇಂದು ನಡೆದ ಸೆಮಿಫೈನಲ್ ಪಂದ್ಯ ರೋಚಕ ಟೈ ಆಗಿತ್ತು. ಬಳಿಕ ನಡೆದ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿದ ಬಾಂಗ್ಲಾದೇಶ ಫೈನಲ್ ಗೆ ಲಗ್ಗೆ ಇಟ್ಟಿತು. ಭಾರತ ಟೂರ್ನಿಯಿಂದಲೇ ನಿರ್ಗಮಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ್ದ ಭಾರತ ಎ ತಂಡ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 194 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು.
ಭಾರತ ಎ ತಂಡದ ಪರ ಪ್ರಿಯಾಂಶ್ ಆರ್ಯ (44) ವೈಭವ್ ಸೂರ್ಯವಂಶಿ (38) ನಾಯಕ ಜಿತೀಶ್ ಶರ್ಮಾ (33) ನೇಹಲ್ ವಧೇರಾ (32) ಹಾಗೂ ರಮಣದೀಪ್ ಸಿಂಗ್ (17) ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಭಾರತದ ಗೆಲುವಿಗೆ 16 ಹಾಗೂ ಕೊನೆಯ ಎಸೆತದಲ್ಲಿ ನಾಲ್ಕು ರನ್ ಗಳ ಅಗತ್ಯವಿತ್ತು.
ಅಂತಿಮ ಓವರ್ ನಲ್ಲಿ ಸಿಕ್ಸರ್ ಹಾಗೂ ಬೌಂಡರಿ ಬಾರಿಸಿದ ಅಶುತೋಷ್ ಶರ್ಮಾ ಐದನೇ ಎಸೆತದಲ್ಲಿ ಔಟ್ ಆದರು. ಆದರೆ ಕೊನೆಯ ಎಸೆತದಲ್ಲಿ ಹರ್ಷ್ ದುಬೆ ಮೂರು ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆದ್ದರಿಂದ ವಿಜೇತರನ್ನು ಗುರುತಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು.
ಸೂಪರ್ ಓವರ್ ನ ಮೊದಲ ಎಸೆತದಲ್ಲಿ ನಾಯಕ ಜಿತೇಶ್ ಶರ್ಮಾ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೈಕೊಟ್ಟರು. ಬಳಿಕದ ಎಸೆತದಲ್ಲಿ ಅಶುತೋಷ್ ಕೂಡಾ ಔಟ್ ಆದರು. ಆದಾಗ್ಯೂ, ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸುವಲ್ಲಿ ಸುಯಶ್ ಶರ್ಮಾ ಯಶಸ್ವಿಯಾದರು. ಎರಡನೇ ಎಸೆತ ವೈಡ್ ಆಗುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿತು.
ಸೂಪರ್ ಓವರ್ ನಲ್ಲಿ ವೈಭವ್ ಸೂರ್ಯವಂಶಿಯನ್ನು ಬ್ಯಾಟಿಂಗ್ ಗೆ ಕಳುಹಿಸದಿರುವ ನಿರ್ಧಾರ ಇದೀಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಕಿಡಿಕಾರುತ್ತಿದ್ದಾರೆ.
ಸೂಪರ್ ಓವರ್‌ನಲ್ಲಿ ವೈಭವ್ ಅವರನ್ನು ಯಾರು ಬ್ಯಾಟಿಂಗ್ ಮಾಡಲು ಕಳುಹಿಸಲಿಲ್ಲವೋ ಅವರು ಮತ್ತೆಂದೂ ಕೋಚಿಂಗ್ ಹುದ್ದೆ ಮಾಡಬಾರದು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಸೂಪರ್ ಓವರ್‌ನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಬ್ಯಾಟಿಂಗ್ ಗೆ ಕಳುಹಿಸದಿದ್ದವರು ಏನು ಧೂಮಪಾನ ಮಾಡುತ್ತಿದ್ದರೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ. ನವೆಂಬರ್ 23 ರ ಭಾನುವಾರ ದೋಹಾದಲ್ಲಿ ನಡೆಯುವ ಫೈನಲ್‌ನಲ್ಲಿ ಬಾಂಗ್ಲಾದೇಶ ಈಗ ಪಾಕಿಸ್ತಾನ ಅಥವಾ ಶ್ರೀಲಂಕಾವನ್ನು ಎದುರಿಸಲಿದೆ.