WPL 2026 ಹರಾಜು ಶೀಘ್ರದಲ್ಲೇ ಆರಂಭವಾಗಲಿದ್ದು, ಇಬ್ಬರು ಭಾರತೀಯ ಆಟಗಾರ್ತಿಯರಾದ ರೇಣುಕಾ ಸಿಂಗ್ ಠಾಕೂರ್ ಮತ್ತು ದೀಪ್ತಿ ಶರ್ಮಾ ಅವರು ಮಾರ್ಕ್ಯೂ ಸೆಟ್‌ನಲ್ಲಿ (ಎಲೈಟ್ ಗ್ರೂಪ್) ಸ್ಥಾನ ಪಡೆದಿದ್ದಾರೆ ಎಂದು ESPNCricinfo ವರದಿ ತಿಳಿಸಿದೆ. ನ್ಯೂಜಿಲೆಂಡ್‌ನ ಸೋಫಿ ಡಿವೈನ್, ಅಮೆಲಿಯಾ ಕೆರ್, ಆಸ್ಟ್ರೇಲಿಯಾದ ಅಲಿಸಾ ಹೀಲಿ, ಮೆಗ್ ಲ್ಯಾನಿಂಗ್, ಇಂಗ್ಲೆಂಡ್‌ನ ಸೋಫಿ ಎಕಲ್‌ಸ್ಟನ್ ಮತ್ತು ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ಟ್ ಪಟ್ಟಿಯಲ್ಲಿರುವ ಇತರ ಆಟಗಾರ್ತಿಯರಾಗಿದ್ದಾರೆ.
ಅದರಲ್ಲಿಯೂ, ರೇಣುಕಾ ಮತ್ತು ವೋಲ್ವಾರ್ಡ್ಟ್ ತಮ್ಮ ಮೂಲ ಬೆಲೆಯನ್ನು ಕ್ರಮವಾಗಿ 40 ಮತ್ತು 30 ಲಕ್ಷಗಳಲ್ಲಿ ಇಟ್ಟುಕೊಂಡಿರುವ ಆಟಗಾರರಾಗಿದ್ದಾರೆ. ನವೆಂಬರ್ 27 ರಂದು ದೆಹಲಿಯಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ (WPL) 2026 ಹರಾಜಿಗೆ 277 ಆಟಗಾರ್ತಿಯರು ನೋಂದಾಯಿಸಿಕೊಂಡಿದ್ದಾರೆ.
ಡಬ್ಲ್ಯುಪಿಎಲ್‌ನ ಐದು ಫ್ರಾಂಚೈಸಿಗಳ ತಂಡಗಳು ಕೇವಲ 73 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಆ ಪೈಕಿ ಕೇವಲ 23 ವಿದೇಶಿ ಆಟಗಾರರನ್ನು ಖರೀದಿಸಬೇಕಿದೆ. WPL ಇತಿಹಾಸದಲ್ಲಿಯೇ ಇದು ಮೊದಲ ಮೆಗಾ ಹರಾಜಾಗಿದೆ. WPL 2026ರ ಆವೃತ್ತಿಗೆ ಮುನ್ನ, UP ವಾರಿಯರ್ಜ್ ತಂಡವು ಶ್ವೇತಾ ಸೆಹ್ರಾವತ್ ಅವರನ್ನು ಮಾತ್ರ ಉಳಿಸಿಕೊಂಡು ದೀಪ್ತಿ ಶರ್ಮಾ, ಅಲಿಸ್ಸಾ ಹೀಲಿ ಮತ್ತು ಸೋಫಿ ಎಕಲ್‌ಸ್ಟನ್ ಅವರಂತಹ ಆಟಗಾರರನ್ನು ಕೈಬಿಟ್ಟಿದೆ. ಆದರೆ, ಈ ಆಟಗಾರರನ್ನು ಮರಳಿ ಪಡೆಯಲು ಹಣ ಮತ್ತು RTM ಇದೆ.
ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಹರ್ಲೀನ್ ಡಿಯೋಲ್ ಅವರನ್ನು ಗುಜರಾತ್ ಜೈಂಟ್ಸ್ ತಂಡ (ಜಿಜಿ) ಕೈಬಿಟ್ಟಿದೆ. ಹೀಗಾಗಿ, ಆಲ್-ರೌಂಡರ್ ವಿಭಾಗದಲ್ಲಿ ಅವರ ಮೂಲ ಬೆಲೆ 50 ಲಕ್ಷ ಎಂದು ಪಟ್ಟಿ ಮಾಡಲಾಗಿದೆ. ಮತ್ತೊಂದೆಡೆ, ರಾಧಾ ಯಾದವ್ ಮತ್ತು ಸ್ನೇಹ ರಾಣಾ ಅವರ ಮೂಲ ಬೆಲೆ 30 ಲಕ್ಷ ಎಂದು ಪಟ್ಟಿ ಮಾಡಲಾಗಿದೆ. ಅಷ್ಟೇ ಅಲ್ಲದೆ, ಉಮಾ ಚೆಟ್ರಿ ಮತ್ತು ಕ್ರಾಂತಿ ಗೌಡ್ ಕೂಡ ತಮ್ಮ ಮೂಲ ಬೆಲೆಯನ್ನು 50 ಲಕ್ಷ ವಿಭಾಗದಲ್ಲಿ ಇರಿಸಿದ್ದಾರೆ.
ಯುಪಿಡಬ್ಲ್ಯು ₹14.50 ಕೋಟಿ ಹಣವನ್ನು ಹೊಂದಿದೆ. ಜಿಜಿ ₹9 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ₹6.15 ಕೋಟಿ, ಮುಂಬೈ ಇಂಡಿಯನ್ಸ್ (ಎಂಐ) ₹5.75 ಕೋಟಿಯೊಂದಿಗೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ₹5.70 ಕೋಟಿಯೊಂದಿಗೆ ನಂತರದ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ಐದು ಆಟಗಾರರನ್ನು ಉಳಿಸಿಕೊಂಡಿವೆ.