ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್ ಅಂತರದ ಸೋಲಿನ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಗೆಲುವಿಗೆ 124 ರನ್‌ಗಳನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 93 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ, ಸ್ಪಿನ್ ಸ್ನೇಹಿ ಪಿಚ್ ಕೇಳಿದ್ದಕ್ಕಾಗಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದ್ದಕ್ಕಾಗಿಯೂ ಗಂಭೀರ್ ಅವರನ್ನು ವ್ಯಾಪಕವಾಗಿ ಟೀಕಿಸಲಾಯಿತು. ಹೆಚ್ಚುತ್ತಿರುವ ಟೀಕೆಗಳ ನಡುವೆ, ಗಂಭೀರ್‌ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಬೆಂಬಲಿಸಿದ್ದಾರೆ.
ಇತ್ತೀಚಿನ ಸಂವಾದವೊಂದರಲ್ಲಿ, 'ನಮ್ಮ ಆಯ್ಕೆದಾರರು, ಮುಖ್ಯ ಕೋಚ್ ಮತ್ತು ಆಟಗಾರರು ಸೇರಿದಂತೆ ನಮ್ಮ ಕೋಚಿಂಗ್ ತಂಡದ ಮೇಲೆ ಬಿಸಿಸಿಐ ಸಂಪೂರ್ಣ ವಿಶ್ವಾಸ ಹೊಂದಿದೆ. ನಾವು ಯಾರನ್ನೂ ಪ್ರತ್ಯೇಕಿಸುವುದಿಲ್ಲ. ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಮತ್ತು ಅದಕ್ಕಾಗಿಯೇ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೀವು ಹೇಳಿದಂತೆ, ಯಾರಾದರೂ ಪಂದ್ಯವನ್ನು ಸೋತರೆ, ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ಬರುತ್ತವೆ' ಎಂದು ಅವರು ರೆವ್‌ಸ್ಪೋರ್ಟ್ಜ್‌ಗೆ ತಿಳಿಸಿದರು.
'ನಾವು ಯಾವಾಗಲೂ ಅದನ್ನು ನಿರ್ಲಕ್ಷಿಸುತ್ತಿದ್ದೇವೆ. ಏಕೆಂದರೆ, ಅದೇ ಸಮಯದಲ್ಲಿ, ಅದೇ ತಂಡದೊಂದಿಗೆ, ನಾವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದೇವೆ, ನಾವು ಏಷ್ಯಾ ಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದೇವೆ, ನಾವು ಟ್ರೋಫಿಯನ್ನು ಗೆದ್ದಿದ್ದೇವೆ ಮತ್ತು ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯನ್ನು ಸಮಬಲಗೊಳಿಸಿದ್ದೇವೆ' ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಕೇಳಿಬಂದ ಟೀಕೆಗಳಿಗೆ ಅಸಮ್ಮತಿ ವ್ಯಕ್ತಪಡಿಸಿ, ಅವರನ್ನು ಸಮರ್ಥಿಸಿಕೊಂಡರು. ಈ ಟೀಕೆಗಳು ತಮ್ಮದೇ ಆದ ವೈಯಕ್ತಿಕ ಕಾರ್ಯಸೂಚಿಗಳನ್ನು ಹೊಂದಿರುವ ಜನರಿಂದ ಬರುತ್ತವೆ ಎಂದರು.
ಕೋಲ್ಕತ್ತಾ ಟೆಸ್ಟ್‌ನಲ್ಲಿ ಭಾರತ 30 ರನ್‌ಗಳ ಸೋಲನ್ನು ಅನುಭವಿಸಿತು. ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ತವರಿನಲ್ಲಿ ನಡೆದ ತಮ್ಮ ಕೊನೆಯ ಆರು ಟೆಸ್ಟ್‌ಗಳಲ್ಲಿ ನಾಲ್ಕನೇ ಸೋಲು ಇದಾಗಿದೆ.
'ಪಿಚ್ ಕ್ಯುರೇಟರ್‌ಗಳು ಹೊಣೆ ಹೊರಬಾರದು ಎಂಬ ಕಾರಣಕ್ಕೆ ಗೌತಮ್ ತಮ್ಮ ಮೇಲೆಯೇ ಆರೋಪ ಹೊತ್ತುಕೊಂಡರು. ಖಂಡಿತವಾಗಿಯೂ, ನಾವು ಭಾರತದಲ್ಲಿ ಆಡುವಾಗ - ಇತರ ದೇಶಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಂತೆ - ನಾವು ಸ್ಪಿನ್ ಅನ್ನು ಅವಲಂಬಿಸಿದ್ದೇವೆ. ಸ್ಪಿನ್‌ಗೆ ಸ್ವಲ್ಪ ಸಹಾಯದೊಂದಿಗೆ ಪಂದ್ಯಗಳು ನಾಲ್ಕರಿಂದ ನಾಲ್ಕೂವರೆ ದಿನಗಳವರೆಗೆ ಇರುತ್ತದೆ ಎಂದು ನಾವು ಸಾಮಾನ್ಯವಾಗಿ ನಿರೀಕ್ಷಿಸುತ್ತೇವೆ. ವೇಗದ ಬೌಲರ್‌ಗಳು 1 ಮತ್ತು 2ನೇ ದಿನದಂದು ಆಟದಲ್ಲಿ ಉಳಿಯುತ್ತಾರೆ' ಎಂದು ಸೀತಾಂಶು ಕೋಟಕ್ ಹೇಳಿದರು.
'ಜನರು ಗೌತಮ್ ಗಂಭೀರ್ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳು ಏನು ಮಾಡಿದರು ಅಥವಾ ಬ್ಯಾಟಿಂಗ್ ಕೋಚ್ ಇನ್ನೂ ಉತ್ತಮವಾಗಿ ಏನು ಮಾಡಬಹುದಿತ್ತು ಎಂಬುದನ್ನು ಯಾರೂ ಉಲ್ಲೇಖಿಸುತ್ತಿಲ್ಲ. ನಾವು ಸೋತ ಪಂದ್ಯಗಳಲ್ಲಿ, ಎಲ್ಲವೂ ಗಂಭೀರ್ ಬಗ್ಗೆಯೇ ಆಗುತ್ತದೆ. ಬಹುಶಃ ಕೆಲವು ಜನರಿಗೆ ಅವರದೇ ಆದ ವೈಯಕ್ತಿಕ ಕಾರ್ಯಸೂಚಿಗಳಿರಬಹುದು' ಎಂದು ಕೋಟಕ್ ಹೇಳಿದರು.