ಪರ್ತ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿ ಆರಂಭದಿಂದಲೇ ದಾಖಲೆಗಳ ನಿರ್ಮಾಣದಲ್ಲಿ ತೊಡಗಿದ್ದು, 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ.
ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ಆಸ್ಚ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಅಂತ್ಯವಾಗಿದ್ದು, ಕಾಂಗರೂಗಳು ಭರ್ಜರಿ ಜಯ ಸಾಧಿಸಿದ್ದಾರೆ. ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ಅಂತ್ಯವಾದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಅತ್ಯಪರೂಪದ ದಾಖಲೆ ನಿರ್ಮಾಣ
ಸರಣಿಯ ಮೊದಲ ಮ್ಯಾಚ್ನಲ್ಲೇ ಹೊಸ ಇತಿಹಾಸ ನಿರ್ಮಾಣವಾಗಿದ್ದು, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದ ಸ್ಟಾರ್ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಹಾಗೂ ಜೋಫ್ರಾ ಆರ್ಚರ್ ಇತಿಹಾಸ ನಿರ್ಮಿಸಿದ್ದಾರೆ. ಮೊದಲ ಪಂದ್ಯದ ಮೂರು ಇನ್ನಿಂಗ್ಸ್ ಗಳಲ್ಲಿ ಉಭಯ ವೇಗಿಗಳು ಆರಂಭಿಕ ಬ್ಯಾಟರ್ ಗಳನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ 148 ವರ್ಷಗಳ ಕ್ರಿಕೆಟ್ ಇತಿಹಾಸದ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮೂರು ಇನಿಂಗ್ಸ್ನಲ್ಲೂ ಆರಂಭಿಕ ದಾಂಡಿಗರು ಸೊನ್ನೆ ಸುತ್ತಿದ್ದಾರೆ. ಅಂದರೆ ಟೆಸ್ಟ್ ಪಂದ್ಯದ ಮೊದಲ ಮೂರು ಇನಿಂಗ್ಸ್ನಲ್ಲಿ ಆರಂಭಿಕ ಜೊತೆಯಾಟ ಮೂಡಿಬರದೇ ಇರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದರು. ಈ ಪಂದ್ಯದ ಮೊದಲ ಓವರ್ನ 6ನೇ ಎಸೆತದಲ್ಲೇ ಝಾಕ್ ಕ್ರಾಲಿ (0) ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್ನ ಮೊದಲ ಓವರ್ನಲ್ಲೇ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಘಾತ ನೀಡಿದ್ದರು.
ಮೊದಲ ಓವರ್ನ 2ನೇ ಎಸೆತದಲ್ಲೇ ಜೇಕ್ ವೆದರಾಲ್ಡ್ (0) ವಿಕೆಟ್ ಕಬಳಿಸಿ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನಲ್ಲೇ ಆಂಗ್ಲ ಪಡೆಗೆ ಮಿಚೆಲ್ ಸ್ಟಾರ್ಕ್ ಬಿಗ್ ಶಾಕ್ ನೀಡಿದರು. ಈ ಬಾರಿ ಕೂಡ ಸ್ಟಾರ್ಕ್ ಬಲೆಗೆ ಬಿದ್ದದ್ದು ಝಾಕ್ ಕ್ರಾಲಿ. ದ್ವಿತೀಯ ಇನಿಂಗ್ಸ್ನ ಮೊದಲ ಓವರ್ನ 5ನೇ ಎಸೆತದಲ್ಲೇ ಕ್ರಾಲಿಯನ್ನು ಎಲ್ಬಿಡಬ್ಲ್ಯೂ ಮಾಡುವಲ್ಲಿ ಮಿಚೆಲ್ ಸ್ಟಾರ್ಕ್ ಯಶಸ್ವಿಯಾಗಿದ್ದಾರೆ.
ಮೂರು ಇನ್ನಿಂಗ್ಸ್ ನಲ್ಲಿ ಆರಂಭಿಕರ ಡಕೌಟ್
ಈ ಪಂದ್ಯದ ಮೊದಲ ಮೂರು ಇನಿಂಗ್ಸ್ನಲ್ಲೂ ಆರಂಭಿಕ ಜೋಡಿಯ ಜೊತೆಯಾಟ ಬಂದಿರಲಿಲ್ಲ. ಮೂರು ಇನಿಂಗ್ಸ್ನಲ್ಲೂ ಓರ್ವ ಆರಂಭಿಕ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗೆ ಪಂದ್ಯವೊಂದರ ಮೂರು ಇನಿಂಗ್ಸ್ಗಳಲ್ಲೂ ಒಂದೇ ರನ್ನಿನ ಆರಂಭಿಕ ಜೊತೆಯಾಟದಿಂದ ರನ್ ಗಳು ಬರದೇ ಟೆಸ್ಟ್ ಪಂದ್ಯ ನಡೆದಿರುವುದು ಇದೇ ಮೊದಲು.
ಕಳೆದ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವತ್ತೂ ಮೂರು ಇನಿಂಗ್ಸ್ನಲ್ಲೂ ತಂಡದ ಸ್ಕೋರ್ ಖಾತೆ ತೆರೆಯುವ ಮುನ್ನವೇ ಆರಂಭಿಕ ದಾಂಡಿಗ ಔಟಾದ ನಿದರ್ಶನವಿಲ್ಲ. ಇದೀಗ ಝಾಕ್ ಕ್ರಾಲಿ (2 ಇನಿಂಗ್ಸ್ಗಳಲ್ಲೂ) ಹಾಗೂ ಜೇಕ್ ವೆದರಾಲ್ಡ್ ಸೊನ್ನೆ ಸುತ್ತುವ ಮುನ್ನವ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.