ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ 2025 ಟ್ರೋಫಿಯನ್ನು ನಿರಾಕರಿಸುವ ಟೀಂ ಇಂಡಿಯಾದ ನಿರ್ಧಾರದ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಭಾರತದ ನಿಲುವಿಗೆ ಕೋಪಗೊಂಡ ನಖ್ವಿ, ಸೂರ್ಯಕುಮಾರ್ ಯಾದವ್ ತಂಡಕ್ಕೆ ಟ್ರೋಫಿ ಹಸ್ತಾಂತರಿಸದಿರಲು ನಿರ್ಧರಿಸಿದರು. ಬದಲಾಗಿ, ಅವರು ಟ್ರೋಫಿ ಮತ್ತು ವಿಜೇತರ ಪದಕಗಳನ್ನು ದುಬೈನಲ್ಲಿರುವ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋದರು. ಈ ಇಡೀ ಕಥೆಯನ್ನು ನೋಡಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಿಗ್ಗಜ ಎಬಿ ಡಿವಿಲಿಯರ್ಸ್, ಕ್ರೀಡೆಯಲ್ಲಿಯೂ ರಾಜಕೀಯ ಬೆರೆಸುವ ಟೀಂ ಇಂಡಿಯಾವನ್ನು ಟೀಕಿಸಿದರು.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿನ ವಿಡಿಯೋದಲ್ಲಿ, 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಐದು ವಿಕೆಟ್‌ಗಳಿಂದ ಸೋಲಿಸಿದ ನಂತರ ನಡೆದ ಕಥೆಯನ್ನು ನೋಡಿ ಬೇಸರವಾಯಿತು. ಕ್ರಿಕೆಟ್ ಮತ್ತು ರಾಜಕೀಯವನ್ನು ಯಾವಾಗಲೂ ಪರಸ್ಪರ ಪ್ರತ್ಯೇಕವಾಗಿ ಇಡಬೇಕು ಎಂದು ಎಬಿ ಡಿವಿಲಿಯರ್ಸ್ ತಿಳಿಸಿದರು.
'ಟ್ರೋಫಿಯನ್ನು ಯಾರು ವಿತರಿಸುತ್ತಿದ್ದಾರೆ ಎಂಬುದರ ಬಗ್ಗೆ ಟೀಂ ಇಂಡಿಯಾ ಸ್ವಲ್ಪ ಮಟ್ಟಿಗೆ ಸಂತೋಷವಾಗಿರಲಿಲ್ಲ. ಅದು ಕ್ರೀಡೆಗೆ ಸೇರಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯವನ್ನು ಬದಿಗಿಡಬೇಕು. ಕ್ರೀಡೆ ಒಂದು ಪ್ರತ್ಯೇಕ ವಿಷಯ ಮತ್ತು ಅದು ಹೇಗಿದೆಯೋ ಹಾಗೆಯೇ ಆಚರಿಸಬೇಕು. ಅದನ್ನು ನೋಡಲು ತುಂಬಾ ದುಃಖವಾಗಿದೆ. ಆದರೆ, ಭವಿಷ್ಯದಲ್ಲಿ ಅವರು ಆ ವಿಷಯಗಳನ್ನು ಸರಿಪಡಿಸುತ್ತಾರೆ ಎಂದು ಆಶಿಸುತ್ತೇವೆ. ಇದು ಕ್ರೀಡೆ, ಆಟಗಾರರು, ಕ್ರೀಡಾಪಟುಗಳು, ಕ್ರಿಕೆಟಿಗರನ್ನು ತುಂಬಾ ಕಠಿಣ ಸ್ಥಿತಿಯಲ್ಲಿ ಇರಿಸುತ್ತದೆ ಮತ್ತು ಅದನ್ನು ನೋಡಲು ನಾನು ಇಷ್ಟಪಡುವುದಿಲ್ಲ. ಕೊನೆಯಲ್ಲಿ ಅದು ತುಂಬಾ ವಿಚಿತ್ರವಾಗಿತ್ತು' ಎಂದು ಡಿವಿಲಿಯರ್ಸ್ ಹೇಳಿದರು.
ಏಷ್ಯಾ ಕಪ್ ವಿವಾದದಿಂದಾಗಿ ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಸಂಬಂಧಗಳು ಪಂದ್ಯಾವಳಿಯ ಉದ್ದಕ್ಕೂ ಕ್ರಿಕೆಟ್ ಮೇಲೆ ಪರಿಣಾಮ ಬೀರಿದವು. ಭಾರತ ಅಜೇಯವಾಗಿ ಪ್ರಶಸ್ತಿಯನ್ನು ಎತ್ತಿ ಹಿಡಿದರೂ, ಎದುರಾಳಿ ತಂಡ ಪಾಕಿಸ್ತಾನದ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ನಿರಾಕರಿಸಿದ್ದು ಭಾರಿ ಚರ್ಚೆಗೆ ಗ್ರಾಸವಾಯಿತು.
ಆದಾಗ್ಯೂ, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತದ ಟಿ20 ತಂಡದ ಬಗ್ಗೆ ಡಿವಿಲಿಯರ್ಸ್ ತುಂಬಾ ಪ್ರಭಾವಿತರಾಗಿದ್ದಾರೆ.
'ಅತ್ಯಂತ ಮುಖ್ಯವಾದುದರ (ಕ್ರಿಕೆಟ್ ಬಗ್ಗೆಯೇ) ಬಗ್ಗೆ ಮಾತ್ರ ಗಮನಹರಿಸೋಣ. ಭಾರತ ನಿಜವಾಗಿಯೂ ಬಲಿಷ್ಠವಾಗಿ ಕಾಣುತ್ತಿದೆ. ಆ ಟಿ20 ವಿಶ್ವಕಪ್‌ಗಾಗಿ ಹೋರಾಡುವುದು ಮುಖ್ಯ. ನೆನಪಿಡಿ, ಅದು ತುಂಬಾ ದೂರದಲ್ಲಿಲ್ಲ ಮತ್ತು ಅವರು ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವಂತೆ ಕಾಣುತ್ತಾರೆ ಮತ್ತು ಅವರು ದೊಡ್ಡ ಹೊಡೆತಗಳನ್ನು ಚೆನ್ನಾಗಿ ಆಡುತ್ತಾರೆ. (ವೀಕ್ಷಿಸಲು) ತುಂಬಾ ಅದ್ಭುತವಾಗಿದೆ' ಎಂದು ಡಿವಿಲಿಯರ್ಸ್ ಹೇಳಿದರು.