ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್ (KL Rahul) 148 ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಪರೂಪ, ವಿಚಿತ್ರ ದಾಖಲೆ ಬರೆದಿದ್ದಾರೆ.
ಹೌದು.. ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಶತಕ ಸಿಡಿಸಿದ ಕೆಎಲ್ ರಾಹುಲ್ ಅತ್ಯಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ವಿಂಡೀಸ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. 197 ಎಸೆತಗಳನ್ನು ಎದುರಿಸಿದ ರಾಹುಲ್, 12 ಬೌಂಡರಿಗಳ ಸಹಿತ 100 ರನ್ ಗಳಿಸಿದರು. ಆದರೆ ಶತಕದ ಬೆನ್ನಲ್ಲೇ ಜೋಮೆಲ್ ವಾರಿಕನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಅತ್ಯಪರೂಪ, ವಿಚಿತ್ರ ದಾಖಲೆ
ಅಂತೆಯೇ ಈ ಮೂಲಕ ಕೆಎಲ್ ರಾಹುಲ್ ಟೆಸ್ಟ್ ಇತಿಹಾಸದಲ್ಲಿ 100 ರನ್ ಗಳಿಸಿದ ಬೆನ್ನಲ್ಲೇ ಔಟಾಗಿ ಅತ್ಯಪರೂಪ, ವಿಚಿತ್ರ ದಾಖಲೆ ನಿರ್ಮಿಸಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ವಿಭಿನ್ನ ಸಂದರ್ಭಗಳಲ್ಲಿ 100 ರನ್‌ಗಳಿಸಿ ಔಟಾದ ಮೊದಲ ಕ್ರಿಕೆಟಿಗ ಎಂಬ (ಕು) ಖ್ಯಾತಿಗೆ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ.
ಶುಕ್ರವಾರ ಅಹ್ಮದಾಬಾದ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2 ನೇ ದಿನದಂದು ರಾಹುಲ್ ತಮ್ಮ 11ನೇ ಟೆಸ್ಟ್ ಶತಕವನ್ನು ಬಾರಿಸಿದ್ದರು. ಇದು ತವರಿನಲ್ಲಿ ಅವರ ಎರಡನೇ ಟೆಸ್ಟ್ ಶತಕವಾಗಿತ್ತು, ಆದರೆ ಈ ಮೈಲಿಗಲ್ಲು ತಲುಪಿದ ಕೂಡಲೇ ರಾಹುಲ್ ಔಟಾದರು.
2ನೇ ಬಾರಿಗೆ 100 ರನ್ ಗೆ ಔಟ್!
ಅಂತೆಯೇ ಅಂತಾರಾಷ್ಟ್ರೀಯ ಟೆಸ್ಟ್‌ನಲ್ಲಿ ರಾಹುಲ್ ಶತಕ ಗಳಿಸಿದ್ದು ಮತ್ತು ನಿಖರವಾಗಿ 100 ರನ್‌ಗಳಿಗೆ ಔಟಾದದ್ದು ಇದು ಎರಡನೇ ಬಾರಿ. ಕಳೆದ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ ಅವರು 100 ರನ್ ಗಳಿಸಿ ಔಟಾಗಿದ್ದರು.
148 ವರ್ಷಗಳಲ್ಲಿ ಇದೇ ಮೊದಲು
1877 ರಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಾಗಿನಿಂದ, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ಕ್ರಿಕೆಟಿಗ ಎರಡು ಬಾರಿ 100 ರನ್‌ಗಳಿಗೆ ಔಟಾಗಿರಲಿಲ್ಲ. ಆದರೆ ಕನ್ನಡಿಗ ಕೆಎಲ್ ರಾಹುಲ್ ಈ ದಾಖಲೆಗೆ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ರಾಹುಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ಬಾರಿ 100 ರನ್‌ಗಳಿಗೆ ಔಟಾದ ಏಳನೇ ಆಟಗಾರರಾಗಿದ್ದಾರೆ.