ಮೊಹಮ್ಮದ್ ಶಮಿ ಬಹಳ ಸಮಯದಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ. ಈ ವೇಗದ ಬೌಲರ್ ಕೊನೆಯ ಬಾರಿಗೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು ಮತ್ತು ಅಂದಿನಿಂದ ಫಿಟ್ನೆಸ್ ಸಮಸ್ಯೆಗಳಿಂದಾಗಿ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಅವರು ಐಪಿಎಲ್‌ನಲ್ಲಿ ಮತ್ತು ಬಂಗಾಳ ಪರ ನಿಯಮಿತವಾಗಿ ದೇಶೀಯ ಕ್ರಿಕೆಟ್ ಆಡುತ್ತಿದ್ದರೂ, ಬಿಸಿಸಿಐ ಆಯ್ಕೆದಾರರು ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಅಕ್ಟೋಬರ್ 19 ರಂದು ಪ್ರಾರಂಭವಾಗುವ ಭಾರತದ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಏಕದಿನ ಮತ್ತು ಟಿ20ಐ ತಂಡಗಳಿಗೆ ಅವರನ್ನು ಪರಿಗಣಿಸಲಾಗಿಲ್ಲ. ಶಮಿ ಈಗ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.
'ಹಲವಾರು ವದಂತಿಗಳು ಮತ್ತು ಮೀಮ್ಸ್‌ಗಳು ಹಬ್ಬಿವೆ. ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗದಿರುವ ಬಗ್ಗೆ ಜನರು ನನ್ನ ಅಭಿಪ್ರಾಯವನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಆಯ್ಕೆಯಾಗುವುದು ನನ್ನ ಕೈಯಲ್ಲಿಲ್ಲ ಎಂದು ನಾನು ಹೇಳುತ್ತೇನೆ; ಅದು ಆಯ್ಕೆ ಸಮಿತಿ, ತರಬೇತುದಾರ ಮತ್ತು ನಾಯಕನ ಕೆಲಸ. ನಾನು ಅಲ್ಲಿ ಇರಬೇಕೆಂದು ಅವರು ಭಾವಿಸಿದರೆ, ಅವರು ನನ್ನನ್ನು ಆಯ್ಕೆ ಮಾಡುತ್ತಾರೆ ಅಥವಾ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಅವರು ಭಾವಿಸಿದರೆ, ಅದು ಅವರ ಕೈಯಲ್ಲಿದೆ. ನಾನು ಸಿದ್ಧನಿದ್ದೇನೆ ಮತ್ತು ಅಭ್ಯಾಸ ಮಾಡುತ್ತಿದ್ದೇನೆ' ಎಂದು ಶಮಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.
'ನನ್ನ ಫಿಟ್ನೆಸ್ ಕೂಡ ಚೆನ್ನಾಗಿದೆ. ನಾನು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ ಏಕೆಂದರೆ ನೀವು ಮೈದಾನದಿಂದ ದೂರದಲ್ಲಿರುವಾಗ, ನೀವು ಪ್ರೇರೇಪಿತವಾಗಿರಬೇಕು. ನಾನು ದುಲೀಪ್ ಟ್ರೋಫಿಯಲ್ಲಿ ಆಡಿದೆ. ನನಗೆ ತುಂಬಾ ಕಂಫರ್ಟ್ ಎನಿಸಿತು. ನನ್ನ ಲಯ ಚೆನ್ನಾಗಿತ್ತು ಮತ್ತು ನಾನು ಸುಮಾರು 35 ಓವರ್‌ಗಳನ್ನು ಬೌಲಿಂಗ್ ಮಾಡಿದ್ದೇನೆ. ನನ್ನ ಫಿಟ್‌ನೆಸ್‌ನಲ್ಲಿ ಯಾವುದೇ ಸಮಸ್ಯೆಗಳಿಲ್ಲ' ಎಂದರು.
ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕ ಸ್ಥಾನದಿಂದ ಬದಲಿಸುವ ಮತ್ತು ಶುಭಮನ್ ಗಿಲ್ ಅವರನ್ನು ಹೊಸ ನಾಯಕನನ್ನಾಗಿ ಮಾಡುವ ವಿಷಯದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.
'ಈ ಪ್ರಶ್ನೆಗೆ ಸಾಕಷ್ಟು ಮೀಮ್ಸ್ ಬಂದಿವೆ. ಯಾವುದೇ ಆಕ್ಷೇಪಣೆ ಇರಬಾರದು ಎಂದು ನಾನು ಭಾವಿಸುತ್ತೇನೆ. ಇದು ಬಿಸಿಸಿಐ, ಆಯ್ಕೆದಾರರು ಮತ್ತು ತರಬೇತುದಾರರ ನಿರ್ಧಾರ. ಶುಭಮನ್ ಇಂಗ್ಲೆಂಡ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರು ಮತ್ತು ಅವರು ಗುಜರಾತ್ ಟೈಟಾನ್ಸ್‌ನ ನಾಯಕರೂ ಆಗಿದ್ದಾರೆ. ಆದ್ದರಿಂದ, ಅವರಿಗೆ ಅನುಭವವಿದೆ. ಈ ಜವಾಬ್ದಾರಿಯನ್ನು ಯಾರಿಗಾದರೂ ನೀಡಬೇಕಾಗಿತ್ತು ಮತ್ತು ಬಿಸಿಸಿಐ ಅದಕ್ಕಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿತು. ಆದ್ದರಿಂದ ನಾವು ಅದನ್ನು ಒಪ್ಪಿಕೊಳ್ಳಬೇಕು' ಎಂದು ಶಮಿ ಹೇಳಿದರು.
'ಜನರು ನಾಯಕತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಬಾರದು. ಇದು ನಮ್ಮ ಕೈಯಲ್ಲಿಲ್ಲ. ಇಂದು ಯಾರೋ ಒಬ್ಬರು ನಾಯಕರಾಗಿದ್ದರೆ, ನಾಳೆ ಬೇರೊಬ್ಬರು ಆಗುತ್ತಾರೆ. ಈ ಚಕ್ರ ಮುಂದುವರಿಯುತ್ತದೆ' ಎಂದರು.