ಲಾಹೋರ್: ಇತ್ತೀಚಿನ ದಿನಗಳಲ್ಲಿ ಸೀಮಿತ ಓವರ್ ಗಳ ಮಾದರಿ ಕ್ರಿಕೆಟ್ ನಲ್ಲಿ ಭಾರತದ ಪರ ಮಿಂಚು ಹರಿಸುತ್ತಿರುವ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾನನ್ನು ನಾನು ಕೇವಲ ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ ಎಂದು ಪಾಕಿಸ್ತಾನದ ಉದಯೋನ್ಮುಖ ವೇಗದ ಬೌಲರ್ ಓರ್ವ ಉದ್ಧಟತನ ಮೆರೆದಿದ್ದಾರೆ.
ಹೌದು.. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದ ಅಭಿಷೇಕ್ ಶರ್ಮಾ ಈಗಲೂ ಪಾಕಿಸ್ತಾನಿ ಆಟಗಾರರ ಕೇಂದ್ರಬಿಂದುವಾಗಿದ್ದು, ಅಭಿಷೇಕ್ ಶರ್ಮಾ ಆ ಟೂರ್ನಿಯಲ್ಲಿ ಸರಣಿ ಶ್ರೇಷ್ಛರಾಗಿದ್ದರು. ಆ ಸರಣಿಯಲ್ಲಿ ತಾವಾಡಿದ ಏಳು ಪಂದ್ಯಗಳಲ್ಲಿ ಮೂರು ಬಾರಿ 50+ ಸ್ಕೋರ್‌ಗಳು ಮತ್ತು ಸುಮಾರು 200 ರ ಅದ್ಭುತ ಸ್ಟ್ರೈಕ್-ರೇಟ್‌ನೊಂದಿಗೆ 314 ರನ್ ಗಳಿಸಿದ್ದರು.
ಅಂತೆಯೇ ಐಸಿಸಿ ಶ್ರೇಯಾಂಕದಲ್ಲಿ ಪ್ರಸ್ತುತ ವಿಶ್ವದ ನಂ. 1 ಬ್ಯಾಟ್ಸ್‌ಮನ್ ಆಗಿರುವ ಪಂಜಾಬ್‌ನ 25 ವರ್ಷದ ಈ ಆಟಗಾರ ಸೂರ್ಯಕುಮಾರ್ ಯಾದವ್ ಅವರ ತಂಡವು ಖಂಡಾಂತರ ಪ್ರಶಸ್ತಿಯನ್ನು ಗೆಲ್ಲಲು ಪ್ರಮುಖ ಕಾರಣಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅಭಿಷೇಕ್ 5 ರನ್ ಗಳಿಸಿ ಔಟಾಗಿದ್ದರು. ಫೈನಲ್ ಪಂದ್ಯಕ್ಕೂ ಮುನ್ನ ಇದೇ ಅಭಿಷೇಕ್ ಶರ್ಮಾ ಪಾಕ್ ಆಟಗಾರರಿಗೆ ದೊಡ್ಡ ತಲೆನೋವಾಗಿದ್ದರು.
ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ
ಇನ್ನು ಇದೇ ಅಭಿಷೇಕ್ ಶರ್ಮಾ ಅವರನ್ನು ತಾವು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ ಎಂದು ಪಾಕಿಸ್ತಾನದ ವೇಗದ ಬೌಲರ್ ಇಹ್ಸಾನುಲ್ಲಾ ಸವಾಲೆಸೆದಿದ್ದಾರೆ. ಈ ಹಿಂದೆ 2023 ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 152.65 ಕಿಮೀ ವೇಗದ ಎಸೆತವನ್ನು ಬೌಲಿಂಗ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ಇಹ್ಸಾನುಲ್ಲಾ ಇದೀಗ ಭಾರತದ ಅಭಿಷೇಕ್ ಶರ್ಮಾಗೆ ನೇರ ಸವಾಲು ಹಾಕಿದ್ದಾರೆ.
ವೇಗದ ಬೌಲಿಂಗ್ ನಿಂದ ಗಮನ ಸೆಳೆದಿದ್ದ ಇಹ್ಸಾನುಲ್ಲಾ ಗಾಯದ ಮಸ್ಯೆಯಿಂದಾಗಿ ಪಾಕ್ ತಂಡದಿಂದ ದೂರು ಉಳಿದಿದ್ದಾರೆ. ಇದೀಗ ಮತ್ತೆ ತಂಡ ಸೇರಿಕೊಳ್ಳಲು ಹಪಹಪಿಸುತ್ತಿರುವ ಇಹ್ಸಾನುಲ್ಲಾ ಭಾರತ ತಂಡದ ಸ್ಟಾರ್ ಆಟಗಾರನಿಗೆ ಸವಾಲೆಸೆದಿದ್ದಾರೆ. "ನಾನು ಭಾರತದ ವಿರುದ್ಧ ಆಡಲು ಅವಕಾಶ ಪಡೆದರೆ, ಅಭಿಷೇಕ್ ಶರ್ಮಾ ಅವರನ್ನು 3-6 ಎಸೆತಗಳಲ್ಲಿ ಔಟ್ ಮಾಡುತ್ತೇನೆ" ಎಂದು ಇಹ್ಸಾನುಲ್ಲಾ ವೀಡಿಯೊದಲ್ಲಿ ಹೇಳಿದ್ದಾರೆ.