ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಜಯಗಳಿಸಿತು ಆದರೆ, ಪಿಸಿಬಿ ಮುಖ್ಯಸ್ಥರಾದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಯಿತು. ನಂತರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯೊಂದಿಗೆ ಮೈದಾನದಿಂದ ಹೊರನಡೆದರು. ಆಗ ಟೀಂ ಇಂಡಿಯಾ ಟ್ರೋಫಿ ಇಲ್ಲದೆಯೇ ಸಂಭ್ರಮಾಚರಣೆ ಮಾಡಿತು. ಎಸಿಸಿಯ ಇತರ ಯಾವುದೇ ಅಧಿಕಾರಿಯು ಭಾರತಕ್ಕೆ ಕಪ್ ಅನ್ನು ನೀಡಲಿಲ್ಲ. ಇದನ್ನು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಟೀಕಿಸಿದ್ದಾರೆ.
ಪಂದ್ಯದ ನಂತರ, ಚಕ್ರವರ್ತಿ ಅವರು ಟ್ರೋಫಿಗೆ ಬದಲಾಗಿ ಕಾಫಿ ಕಪ್ ಅನ್ನು ಹಿಡಿದು ಹಾಸಿಗೆ ಮೇಲೆ ಮಲಗಿರುವ ಚಿತ್ರವೊಂದನ್ನು Instagram ನಲ್ಲಿ ಹಂಚಿಕೊಂಡಿದ್ದರು.
'ನಾನು ಎಲ್ಲವನ್ನೂ ಯೋಜಿಸಿದ್ದೆ. ನಾವು ಎರಡನೇ ಪಂದ್ಯವನ್ನು (ಪಾಕಿಸ್ತಾನ ವಿರುದ್ಧ) ಗೆದ್ದ ನಂತರ, ಫೈನಲ್‌ನಲ್ಲಿ ಆಡಿದರೂ ನಾವು ಅವರ ವಿರುದ್ಧ ಗೆಲ್ಲುತ್ತೇವೆ ಎಂಬುದು ನನಗೆ ತಿಳಿದಿತ್ತು. ಹಾಗಾಗಿ ನಾನು ಟ್ರೋಫಿಯೊಂದಿಗೆ ಮಲಗಿರುವ ಚಿತ್ರವನ್ನು ಪೋಸ್ಟ್ ಮಾಡಲು ಯೋಚಿಸಿದ್ದೆ. ಆದರೆ ಪಂದ್ಯದ ನಂತರ, ನಮ್ಮ ಬಳಿ ಟ್ರೋಫಿ ಇರಲಿಲ್ಲ. ಕೇವಲ ಕಾಫಿ ಕಪ್ ಇತ್ತು. ಹಾಗಾಗಿ ನಾನು ಅದರೊಂದಿಗೆ ಹೋದೆ' ಎಂದು ಚಕ್ರವರ್ತಿ ಹೇಳಿದರು.
'ನಾವು ಎಲ್ಲ ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ನನಗೆ ತಿಳಿದಿತ್ತು. ನಾವು ವಿಶ್ವದ ನಂ. 1 ತಂಡವಾಗಿದ್ದೇವೆ. ಕಪ್ ಚೀನ್ ಸಕ್ತೇ ಹೈ (ನೀವು ಕಪ್ ಅನ್ನು ಕಸಿದುಕೊಳ್ಳಬಹುದು), ಆದರೆ ನಾವು ಚಾಂಪಿಯನ್‌ಗಳು' ಎಂದು ಮೊಹ್ಸಿನ್ ನಖ್ವಿ ಅವರನ್ನು ಟೀಕಿಸಿದರು.
ICC ಶ್ರೇಯಾಂಕದ ಪ್ರಕಾರ, T20I ಬೌಲರ್ ಆಗಿ ಈಗ ನಂ. 1 ಸ್ಥಾನದಲ್ಲಿರುವ ಚಕ್ರವರ್ತಿ, ಭಾರತದ ಏಷ್ಯಾ ಕಪ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಆರು ಪಂದ್ಯಗಳಲ್ಲಿ 6.50ರ ಎಕಾನಮಿ ರೇಟ್‌ನಲ್ಲಿ ಏಳು ವಿಕೆಟ್ ಪಡೆದಿದ್ದಾರೆ.
ಇದು ಚಕ್ರವರ್ತಿ ಅವರ ವರ್ಷದ ಎರಡನೇ ಐಸಿಸಿ ಪ್ರಶಸ್ತಿಯಾಗಿದೆ. ಏಕೆಂದರೆ, ಅವರು ಭಾರತದ ಚಾಂಪಿಯನ್ಸ್ ಟ್ರೋಫಿ 2025 ವಿಜಯೋತ್ಸವದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.