ಶ್ರೀಲಂಕಾವನ್ನು ಒಳಗೊಂಡ ಮುಂಬರುವ T20 ತ್ರಿಕೋನ ಸರಣಿಗೆ ಅಫ್ಗಾನಿಸ್ತಾನದ ಬದಲಿಯಾಗಿ ಜಿಂಬಾಬ್ವೆಯನ್ನು ಪಾಕಿಸ್ತಾನ ಖಚಿತಪಡಿಸಿದೆ. ಪಕ್ತಿಕಾ ಪ್ರಾಂತ್ಯದಲ್ಲಿ ಮೂವರು ಸ್ಥಳೀಯ ಕ್ರಿಕೆಟಿಗರ ದುರಂತ ಸಾವಿನ ನಂತರ ಅಫ್ಗಾನಿಸ್ತಾನ ಪಾಕ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದರೂ, ನವೆಂಬರ್ 17 ರಿಂದ 29ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಿಗದಿಯಾಗಿದ್ದ ಈ ಪಂದ್ಯಾವಳಿ ಈಗ ಯೋಜಿಸಿದಂತೆ ನಡೆಯಲಿದೆ.
ನಿನ್ನೆ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಪಾಕಿಸ್ತಾನದ ಗಡಿಯಾಚೆಗಿನ ವೈಮಾನಿಕ ದಾಳಿಯಲ್ಲಿ ಸಾವಿಗೀಡಾದ 'ಸಂತ್ರಸ್ತರಿಗೆ ಗೌರವ ಸೂಚಿಸುವ ಸಂಕೇತವಾಗಿ' ಈ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದೆ. ಉರ್ಗುನ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಸ್ಥಳೀಯ ಸ್ನೇಹಪರ ಪಂದ್ಯದ ನಂತರ ಮನೆಗೆ ಮರಳುತ್ತಿದ್ದ ಮೂವರು ಕ್ರಿಕೆಟಿಗರಾದ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
'ಪಾಕಿಸ್ತಾನದ ಆಡಳಿತ ನಡೆಸಿದ ಹೇಡಿತನದ ದಾಳಿಯಲ್ಲಿ ಇಂದು ಸಂಜೆ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಜಿಲ್ಲೆಯ ಧೈರ್ಯಶಾಲಿ ಕ್ರಿಕೆಟಿಗರು ಸಾವಿಗೀಡಾದ ಬಗ್ಗೆ ಎಸಿಬಿ ತನ್ನ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ' ಎಂದು ಮಂಡಳಿಯು ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ಮತ್ತು ಬಿಸಿಸಿಐ ಎರಡೂ ಅಫ್ಗಾನಿಸ್ತಾನದ ಕ್ರಿಕೆಟ್ ಆಟಗಾರರೊಂದಿಗೆ ಒಗ್ಗಟ್ಟಿನಿಂದ ನಿಂತು, ಸಂತಾಪ ಸೂಚಿಸುವ ಸಂದೇಶಗಳನ್ನು ನೀಡಿವೆ. ಆದಾಗ್ಯೂ, ಪಾಕಿಸ್ತಾನವು ಈ ಆರೋಪಗಳ ಬಗ್ಗೆ ಮೌನ ಕಾಯ್ದುಕೊಂಡಿದೆ ಮತ್ತು ತ್ರಿಕೋನ ಸರಣಿಯನ್ನು ನಿಗದಿಯಂತೆ ನಡೆಸುವತ್ತ ತನ್ನ ಗಮನ ಹರಿಸಿದೆ.
ಅಫ್ಗಾನಿಸ್ತಾನ ಬದಲಿಗೆ ಜಿಂಬಾಬ್ವೆ ಕರೆತಂದ ಪಾಕ್
ಅಫ್ಗಾನಿಸ್ತಾನ ತಂಡ ಸರಣಿಯಿಂದ ಹಿಂದೆ ಸರಿದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಜಿಂಬಾಬ್ವೆಯನ್ನು ಬದಲಿ ತಂಡವಾಗಿ ಅಂತಿಮಗೊಳಿಸಿದೆ. ಇದಕ್ಕೂ ಮೊದಲು ನೇಪಾಳ ಮತ್ತು ಯುಎಇ ಸೇರಿದಂತೆ ಇತರ ಕ್ರಿಕೆಟ್ ಮಂಡಳಿಗಳನ್ನು ಸಂಪರ್ಕಿಸಿತ್ತು ಎನ್ನಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಪಿಸಿಬಿ, 'ಅಫ್ಗಾನಿಸ್ತಾನ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಮೊದಲೇ ತಿಳಿಸಿತ್ತು ಮತ್ತು ಅಲ್ಪಾವಧಿಯಲ್ಲಿ ಸರಣಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡಿದ್ದಕ್ಕಾಗಿ ಜಿಂಬಾಬ್ವೆ ಕ್ರಿಕೆಟ್‌ಗೆ ಧನ್ಯವಾದ ಅರ್ಪಿಸಿದೆ'.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪಾಕಿಸ್ತಾನ ತಂಡವು ನವೆಂಬರ್ 17 ರಂದು ರಾವಲ್ಪಿಂಡಿಯಲ್ಲಿ ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ನಂತರ ಶ್ರೀಲಂಕಾ ತಂಡವು ನವೆಂಬರ್ 19 ರಂದು ಜಿಂಬಾಬ್ವೆಯನ್ನು ಎದುರಿಸಲಿದೆ. ನವೆಂಬರ್ 29 ರಂದು ನಡೆಯುವ ಫೈನಲ್ ಸೇರಿದಂತೆ ಉಳಿದ ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿವೆ.
ದುರಂತ ನಡೆದ ಕೆಲವೇ ಗಂಟೆಗಳಲ್ಲಿ ಅಫ್ಗಾನಿಸ್ತಾನದ ಬದಲಿಗೆ ಜಿಂಬಾಬ್ವೆಯನ್ನು ಸರಣಿಗೆ ಆಹ್ವಾನಿಸುವ ಪಾಕಿಸ್ತಾನದ ನಿರ್ಧಾರವು ಅತ್ಯಂತ ಅಸಂವೇದನಾಶೀಲವಾಗಿದೆ. ಸಂತಾಪ ಸೂಚಿಸಬೇಕಾದ ಸಮಯದಲ್ಲಿ, 'ಸರಣಿಯನ್ನು ಮುಂದುವರೆಸಲು' ಪಿಸಿಬಿ ಆತುರವನ್ನು ನೋಡಿದರೆ, ಅವರಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ತೋರುತ್ತದೆ ಎನ್ನುವ ಮಾತುಗಳು ಕೇಳಿಬಂದಿವೆ.