ನವದೆಹಲಿ: ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಫಿಟ್ನೆಸ್ ಬಗ್ಗೆ ಟೀಕಿಸಿದ ನಂತರ, ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಬುಧವಾರ ಮತ್ತೆ ವಿವಾದಕ್ಕೆ ಕಾರಣರಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇತ್ತೀಚೆಗೆ ಘೋಷಿಸಿದ ಭಾರತ ಮತ್ತು ಭಾರತ ಎ ತಂಡಗಳಿಂದ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರನ್ನು ಕೈಬಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ.
'ಸರ್ಫರಾಜ್ ಖಾನ್ ಅವರನ್ನು ಹೊರಗಿಡಲು ಅವರ ಧಾರ್ಮಿಕ ಗುರುತೇ ಕಾರಣವೇ?' ಎಂದು ಶಮಾ ಮೊಹಮ್ಮದ್ ಪ್ರಶ್ನಿಸಿದ್ದಾರೆ.
'ಸರ್ಫರಾಜ್ ಖಾನ್ ಅವರನ್ನು ಅವರ ಉಪನಾಮದ ಕಾರಣದಿಂದಾಗಿ ಆಯ್ಕೆ ಮಾಡಲಾಗಿಲ್ಲವೇ! #justasking. ಆ ವಿಷಯದಲ್ಲಿ ಗೌತಮ್ ಗಂಭೀರ್ ಅವರ ನಿಲುವು ನಮಗೆ ತಿಳಿದಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎ ವಿರುದ್ಧದ ನಾಲ್ಕು ದಿನಗಳ ಎರಡು ಪಂದ್ಯಗಳಿಗೆ ಭಾರತ ಎ ತಂಡಗಳನ್ನು ಬಿಸಿಸಿಐ ಘೋಷಿಸಿದ ಒಂದು ದಿನದ ಶಮಾ ಅವರ ಈ ಹೇಳಿಕೆಗಳು ಬಂದಿವೆ.
ಮೊದಲ ಪಂದ್ಯ ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿದ್ದು, ಎರಡನೇ ಪಂದ್ಯ ನವೆಂಬರ್ 6 ರಿಂದ 9 ರವರೆಗೆ ನಡೆಯಲಿದೆ. ಸರ್ಫರಾಜ್ ಖಾನ್ ಅವರ ಸ್ಥಿರ ದೇಶೀಯ ಪ್ರದರ್ಶನದ ಹೊರತಾಗಿಯೂ, ಮತ್ತೊಮ್ಮೆ ಎರಡೂ ತಂಡಗಳಿಗೆ ಆಯ್ಕೆ ವೇಳೆ ಕಡೆಗಣಿಸಲಾಗಿದೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರಲ್ಲಿ ಚರ್ಚೆಗೆ ಕಾರಣವಾಗಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಶ್ರಮಿಸಿದ ನಂತರ, 27 ವರ್ಷದ ಸರ್ಫರಾಜ್ ಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದಿನಿಂದ, ಅವರು ಆರು ಟೆಸ್ಟ್ ಪಂದ್ಯಗಳಳ್ಲಿ 37.10 ಸರಾಸರಿಯಲ್ಲಿ 371 ರನ್ ಗಳಿಸಿದ್ದಾರೆ. 74.94 ಆರೋಗ್ಯಕರ ಸ್ಟ್ರೈಕ್ ರೇಟ್‌ನಲ್ಲಿ 11 ಇನಿಂಗ್ಸ್‌ನಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕ ಗಳಿಸಿದ್ದಾರೆ. 150 ಅವರ ಅತ್ಯುತ್ತಮ ರನ್ ಆಗಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ವಾಂಖೆಡೆಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಭಾರತ ಪರ ಕೊನೆಯ ಬಾರಿಗೆ ಆಡಿದ್ದರು.
ಸರ್ಫರಾಜ್ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 65.19 ಸರಾಸರಿ ಹೊಂದಿದ್ದಾರೆ. 56 ಪಂದ್ಯಗಳಲ್ಲಿ 16 ಶತಕ ಮತ್ತು 15 ಅರ್ಧಶತಕ ಸೇರಿದಂತೆ 2,467 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 70.99 ಆಗಿದೆ.