ನವದೆಹಲಿ: ನಿರೀಕ್ಷೆಯಂತೆಯೇ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದ್ದು, ಭಾರತದಲ್ಲೇ ಸೆಮಿಫೈನಲ್, ಫೈನಲ್ ಪಂದ್ಯ ನಡೆಯಲಿವೆ.
ಹೌದು.. ಭಾರತದಲ್ಲಿ ಹಾಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಹೊರಬಿದ್ದಿದೆ. ತಾನಾಡಿದ 6 ಪಂದ್ಯಗಳ ಪೈಕಿ ಪಾಕಿಸ್ತಾನ ತಂಡ 4 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಇನ್ನು ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದು ಪರಿಣಾಮ ಪಾಕಿಸ್ತಾನ ಕೇವಲ 2 ಅಂಕಗಳನ್ನು ಮಾತ್ರ ಪಡೆದಿದೆ. ಹೀಗಾಗಿ ಪಾಕಿಸ್ತಾನ ತಂಡ ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ.
ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿತ್ತು. ಮಳೆಯಿಂದಾಗಿ ಈ ಪಂದ್ಯ ತಲಾ 40 ಓವರ್ ಗೆ ಸೀಮಿತಗೊಳಿಸಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 40 ಓವರ್ ನಲ್ಲಿ ನಾಯಕಿ ಲಾರಾ ವೋಲ್ವಾರ್ಡ್ (90 ರನ್), ಸುನೆಲೂಸ್ (61 ರನ್), ಮರಿಜಾನ್ನೆ ಕಪ್ಪ್ (68 ರನ್) ಮತ್ತು ನಾಡಿನ್ ಡಿ ಕ್ಲರ್ಕ್ (41 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 312 ರನ್ ಪೇರಿಸಿತು.
ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಬ್ಯಾಟಿಂಗ್ ಗೆ ಆಗಮಿಸಿದಾಗ ಮತ್ತೆ ಆಟಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ ಪಾಕಿಸ್ತಾನಕ್ಕೆ ಗೆಲ್ಲಲು 20 ಓವರ್ ನಲ್ಲಿ 234 ರನ್ ಗಳ ಗುರಿ ನೀಡಲಾಗಿತ್ತು. ಈ ಬೃಹತ್ ಗುರಿ ಬೆನ್ನುಹತ್ತಿದ ಪಾಕಿಸ್ತಾನ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 83 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 150 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಈ ಸೋಲಿನೊಂದಿಗೆ ಪಾಕಿಸ್ತಾನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿತ್ತು. ಟೂರ್ನಿಯಲ್ಲಿ ಪಾಕಿಸ್ತಾನ 6 ಪಂದ್ಯಗಳನ್ನಾಡಿದ್ದು, 4 ಸೋಲು ಕಂಡಿದೆ. 2 ಪಂದ್ಯ ಮಳೆಯಿಂದಾಗಿ ರದ್ದಾಗಿ ಅಂಕ ಹಂಚಿಕೆಯಾಯಿತು.
ಹೀಗಾಗಿ 2 ಅಂಕ ಮಾತ್ರಗಳಿಸಿರುವ ಪಾಕಿಸ್ತಾನ ಟೂರ್ನಿಯಿಂದ ಹೊರಬಿದಿದೆ. ಇದಕ್ಕೂ ಮೊದಲು ಶ್ರೀಲಂಕಾ ವಿರುದ್ದ ಸೋತ ಬಾಂಗ್ಲಾದೇಶ ಕೂಡ ಟೂರ್ನಿಯಿಂದ ಹೊರಬಿದ್ದಿತ್ತು. ಬಾಂಗ್ಲಾದೇಶ 6 ಪಂದ್ಯಗಳ ಪೈಕಿ 5 ಸೋಲು ಮತ್ತು 1 ಗೆಲುವು ಕಂಡಿದೆ.
ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ಗೆ ಮುನ್ನಡೆದಿವೆ. ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಭಾರತ ತಂಡಗಳು ಅಂತಿಮ ಸ್ಥಾನಕ್ಕಾಗಿ ಪ್ರಮುಖ ಸ್ಪರ್ಧಿಗಳಾಗಿವೆ.