ಗುರುವಾರ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು, ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದ್ದಾರೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿಯೂ ಕೊಹ್ಲಿ 8 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದ್ದರು. 2008 ರಲ್ಲಿ ಅವರ ಚೊಚ್ಚಲ ಪಂದ್ಯದ ನಂತರ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದು ಇದೇ ಮೊದಲು. ಭಾರತದ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಅವರು ಬ್ಯಾಟಿಂಗ್ ಮಾಡಲು ಬಂದರು ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರ ಮೊದಲ ಮೂರು ಎಸೆತಗಳನ್ನು ಎಚ್ಚರಿಕೆಯಿಂದ ಆಡಿದರೂ, ನಾಲ್ಕನೆ ಎಸೆತವು ಅವರ ಪ್ಯಾಡ್‌ಗೆ ಅಪ್ಪಳಿಸಿತು. ಅಂಪೈರ್ ಯಾವುದೇ ಅನುಮಾನವಿಲ್ಲದೆ ಔಟ್ ನೀಡಿದರು. ಬಳಿಕ ಕೊಹ್ಲಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿ ಮೂಲಕ ಕೊಹ್ಲಿ 7 ತಿಂಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾದ ಅವರು ರೋಹಿತ್ ಶರ್ಮಾ ಅವರೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು.
ಅಡಿಲೇಡ್‌ನಲ್ಲಿ ವಿರಾಟ್ ಅವರ ಏಕದಿನ ಸಂಖ್ಯೆಗಳು ಉತ್ತಮವಾಗಿವೆ. ನಾಲ್ಕು ಇನಿಂಗ್ಸ್‌ಗಳಲ್ಲಿ 61.00 ಸರಾಸರಿಯಲ್ಲಿ 244 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಇವೆ. 107 ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಅವರ ಎರಡೂ ಶತಕಗಳು ಐತಿಹಾಸಿಕವಾಗಿವೆ. ಒಂದು 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ್ದಾಗಿತ್ತು. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸದ್ಯ, ಕೊಹ್ಲಿ (51 ಏಕದಿನ ಶತಕಗಳು) ಮತ್ತು ಸಚಿನ್ (51 ಟೆಸ್ಟ್ ಶತಕಗಳು) ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.
ಪಂದ್ಯಕ್ಕೂ ಮೊದಲು, ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪರ್ತ್‌ನ ಪರ್ತ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ಭಾರತ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.