ಶಿವಮೊಗ್ಗ: ಇತ್ತೀಚೆಗಷ್ಟೇ ಭಾರತ ತಂಡದಿಂದ ಹೊರಬಿದ್ದಿದ್ದ ಕನ್ನಡಿಗ ಕರುಣ್ ನಾಯರ್ ರಣಜಿ ಟ್ರೋಫಿಯಲ್ಲಿ ಮತ್ತೆ ಅಬ್ಬರ ಶತಕದ ಸಿಡಿಸುವ ಮೂಲಕ ಮತ್ತೆ ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ.
2025-26 ರ ರಣಜಿ ಟ್ರೋಫಿಯ ಎರಡನೇ ಸುತ್ತು ಅಕ್ಟೋಬರ್ 25 ರಿಂದ ಆರಂಭವಾಗಿದ್ದು, ಕರ್ನಾಟಕ ತಂಡ ಗೋವಾ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಪರ 33 ವರ್ಷದ ಕರುಣ್ ನಾಯರ್ ಸ್ಮರಣೀಯ ಇನ್ನಿಂಗ್ಸ್ ಆಡಿದರು. ತಂಡದ ಪರ ಅತ್ಯಧಿಕ ರನ್ ಬಾರಿಸಿದ ಕರುಣ್ 174 ರನ್ ಬಾರಿಸಿ ಅಜೇಯರಾಗಿ ಉಳಿದರು.
ಗೋವಾ ವಿರುದ್ಧ 267 ಎಸೆತಗಳನ್ನು ಎದುರಿಸಿದ ಕರುಣ್ ನಾಯರ್, 3 ಸಿಕ್ಸರ್ ಮತ್ತು 14 ಬೌಂಡರಿ ಸಹಿತ 174 ರನ್ ಕಲೆಹಾಕಿದರು. ಅವರ ಈ ಅಮೋಘ ಇನ್ನಿಂಗ್ಸ್ ಮೂಲಕ ಕರ್ನಾಟಕ ತಂಡ 371 ರನ್ ಗಳಿಸಿದೆ.
ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಗೋವಾ 2ನೇ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 65 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ಕರುಣ್ ನಾಯರ್ ಏಕಾಂಗಿ ಹೋರಾಟ ನಡೆಸಿ ತಂಡವನ್ನು 300 ರನ್‌ಗಳ ಗಡಿ ದಾಟಿಸಿದರು.
ಕೆಲವು ತಿಂಗಳ ಹಿಂದೆ ಕರುಣ್ ನಾಯರ್ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದರೆ ಆ ಸರಣಿಯಲ್ಲಿ ಕರುಣ್ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಹೀಗಾಗಿ ಕೇವಲ ಒಂದು ಸರಣಿಯ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಆದಾಗ್ಯೂ ಛಲ ಬಿಡದ ಕರುಣ್ ಈ ಶತಕದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಕರುಣ್ ನಾಯರ್ ಅವರ 25ನೇ ಪ್ರಥಮ ದರ್ಜೆ ಶತಕ ಕೂಡ ಆಗಿದೆ.
ಇಂಗ್ಲೆಂಡ್ ಸರಣಿಯಲ್ಲಿ ಕರುಣ್ ನಾಯರ್ ವೈಫಲ್ಯ
ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಗಾಗಿ ಕರುಣ್ ನಾಯರ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಯಿತು. ಆದಾಗ್ಯೂ, ಈ ಪ್ರವಾಸದಲ್ಲಿ ಅವರು ಒಂದೇ ಒಂದು ಮಹತ್ವದ ಇನ್ನಿಂಗ್ಸ್ ಆಡಲಿಲ್ಲ. ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಒಂದರಲ್ಲಿ ಮಾತ್ರ 50 ರನ್‌ಗಳ ಗಡಿ ದಾಟಿದರು, ಇದರಿಂದಾಗಿ ಇತ್ತೀಚಿನ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.