ಗುವಾಹತಿ: ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರು ಇತಿಹಾಸ ನಿರ್ಮಿಸಿದ್ದು ಇದೇ ಮೊದಲ ಬಾರಿಗೆ ಟೂರ್ನಿಯ ಫೈನಲ್ ಪ್ರವೇಶಿಸಿದೆ.
ಇಂದು ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 125 ರನ್ ಗಳ ಭರ್ಜರಿ ಜಯ ದಾಖಲಿಸುವ ಮೂಲಕ ದಕ್ಷಿಣ ಆಫ್ರಿಕಾ ಮಹಿಳೆಯರು ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ನೀಡಿದ್ದ 320 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಇಂಗ್ಲೆಂಡ್ ತಂಡ 42.3 ಓವರ್ ನಲ್ಲಿ 194 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ ಬರೊಬ್ಬರಿ 125 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಇಂಗ್ಲೆಂಡ್ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ (64), ಆಲಿಸ್ ಕ್ಯಾಪ್ಸಿ (50) ಅರ್ಧಶತಕ ಸಿಡಿಸಿದರು. ಅಂತೆಯೇ ಡೇನಿಯಲ್ ವ್ಯಾಟ್-ಹಾಡ್ಜ್ (34) ಮತ್ತು ಲಿನ್ಸೆ ಸ್ಮಿತ್ (27) ದಕ್ಷಿಣ ಆಫ್ರಿಕಾಗೆ ಪ್ರತಿರೋಧ ತೋರಿದರಾದರೂ ಉಳಿದಾವ ಬ್ಯಾಟರ್ ಗಳಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ.
ದಕ್ಷಿಣ ಆಫ್ರಿಕಾ ಪರ ಮಾರಿಝನ್ನೆ ಕಾಪ್ 5 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರೆ, ನಡಿನೆ ಡಿ ಕ್ಲೆರ್ಕ್ 2, ಖಾಕಾ, ಮ್ಲಬಾ ಮತ್ತು ಲೂಸ್ ತಲಾ 1 ವಿಕೆಟ್ ಪಡೆದರು.
ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕಾ ವನಿತೆಯರು
ಇನ್ನು ಈ ಸೆಮೀ ಫೈನಲ್ ಪಂದ್ಯದ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾ ವನಿತೆಯರು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.
ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತ ಪೇರಿಸಿತು. ನಿಗಧಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 319 ರನ್ ಪೇರಿಸಿ ಇಂಗ್ಲೆಂಡ್ ಗೆ ಗೆಲ್ಲಲು 320 ರನ್ ಗಳ ಗುರಿ ನೀಡಿತ್ತು.
ಆಫ್ರಿಕಾ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕಿ ಲಾರಾ ವೋಲ್ವಾರ್ಡ್ (164) ಅಮೋಘ ಶತಕ ಸಿಡಿಸಿದರು. 143 ಎಸೆತಗಳನ್ನು ಎದುರಿಸಿದ ಅವರು 4 ಸಿಕ್ಸರ್ ಮತ್ತು 20 ಬೌಂಡರಿಗಳ ನೆರವಿನಿಂದ 164 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ವೋಲ್ವಾರ್ಡ್ ಅವರಿಗೆ ಬ್ರಿಟ್ಸ್ (45), ಮರಿಜಾನ್ನೆ ಕಾಪ್ (42) ಮತ್ತು ಟ್ರೈಆನ್ (ಅಜೇಯ 33 ರನ್) ಉತ್ತಮ ಸಾಥ್ ನೀಡಿದರು.