ಭಾರತ ತಂಡ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತಲ್ಲದೆ, ರೋಮಾಂಚಕ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿತು. ಕ್ರಿಕೆಟ್ ಜಗತ್ತು ವನಿತೆಯರ ಅಸಾಧಾರಣ ಸಾಧನೆಯಿಂದ ಬೆರಗಾಗಿತ್ತು. ಗುರುವಾರ ನವಿ ಮುಂಬೈನಲ್ಲಿ ನಡೆದ ರೋಮಾಂಚಕ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿ ಐಸಿಸಿ ಮಹಿಳಾ ವಿಶ್ವಕಪ್ 2025ರ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಭಾರತಕ್ಕೆ ಸಹಾಯ ಮಾಡಿದ ನಿರ್ಣಾಯಕ ಜೊತೆಯಾಟವಾಡಿದ ಜೆಮಿಮಾ ರೊಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರನ್ನು ಸಚಿನ್ ಶ್ಲಾಘಿಸಿದರು.
ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್, 'ಅದ್ಭುತ ಗೆಲುವು! ತಂಡವನ್ನು ಮುನ್ನಡೆಸಿದ್ದಕ್ಕಾಗಿ ಜೆಮಿಮಾ ರೊಡ್ರಿಗಸ್ ಮತ್ತು ಹರ್ಮನ್‌ಪ್ರೀತ್ ಕೌರ್ ಅವರಿಗೆ ಅಭಿನಂದನೆಗಳು. ಶ್ರೀ ಚರಣಿ ಮತ್ತು ದೀಪ್ತಿ ಶರ್ಮಾ, ನೀವು ಚೆಂಡಿನೊಂದಿಗೆ ಆಟವನ್ನು ಜೀವಂತವಾಗಿರಿಸಿದ್ದೀರಿ. ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಿರಿ' ಎಂದು ಬರೆದಿದ್ದಾರೆ.
ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ 'ವೆಲ್ ಡನ್ ಟೀಮ್ ಇಂಡಿಯಾ' ಎಂದು ಬರೆದಿದ್ದಾರೆ.
ಭಾರತದ ಪುರುಷರ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಭಾರತದ ಐತಿಹಾಸಿಕ ಗೆಲುವನ್ನು ಶ್ಲಾಘಿಸಿದ್ದಾರೆ, 'ಇದಿನ್ನು ಮುಗಿದಿಲ್ಲ! ವನಿತೆಯರಿಂದ ಎಂತಹ ಪ್ರದರ್ಶನ' ಎಂದು ಬರೆದಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೂಡ ತಮ್ಮ 'ಎಕ್ಸ್' ಖಾತೆಯಲ್ಲಿ, 'ಸ್ಕೋರ್‌ಬೋರ್ಡ್‌ನಲ್ಲಿ ಸಂಖ್ಯೆಗಳನ್ನು ಮೀರಿದ ಗೆಲುವುಗಳಿವೆ. ಇದು ಅವುಗಳಲ್ಲಿ ಒಂದು. ಒತ್ತಡದಲ್ಲಿ, ಜಗತ್ತು ನೋಡುತ್ತಿರುವಾಗ, ಹರ್ಮನ್‌ಪ್ರೀತ್ ಕೌರ್ ನಿಜವಾದ ಶಾಂತ ಮತ್ತು ದೃಢನಿಶ್ಚಯದಿಂದ ಆಡಿದರು. ಆದರೆ, ಜೆಮಿಮಾ ರೊಡ್ರಿಗಸ್ ಇನಿಂಗ್ಸ್ ಕಟ್ಟುವ ಶುದ್ಧ ಫೋಕಸ್ ಮತ್ತು ಇಂಟೆಂಟ್ ತಂದರು! ಈ ಜೊತೆಯಾಟವು ಗೆಲುವಿಗೆ ಕಾರಣವಾಯಿತು. ಸೆಮಿಫೈನಲ್‌ನಲ್ಲಿನ ಐತಿಹಾಸಿಕ ಗೆಲುವು ಈಗ ಫೈನಲ್‌ಗೆ ತಂದು ನಿಲ್ಲಿಸಿದೆ' ಎಂದರು.
ಭಾರತ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾ ವಿರುದ್ಧ 339 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ರೊಡ್ರಿಗಸ್ 134 ಎಸೆತಗಳಲ್ಲಿ 14 ಬೌಂಡರಿ ಸೇರಿದಂತೆ 127 ರನ್ ಗಳಿಸಿ ಅಜೇಯರಾಗುಳಿದರು. ಹರ್ಮನ್ ಪ್ರೀತ್ ಕೌರ್ 88 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಒಳಗೊಂಡಂತೆ 89 ರನ್ ಗಳಿಸಿದರು ಮತ್ತು ರೊಡ್ರಿಗಸ್ ಜೊತೆ 167 ರನ್ ಗಳ ಜೊತೆಯಾಟ ನಡೆಸಿದರು.
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಮಾಜಿ ಬ್ಯಾಟರ್ ಶಿಖರ್ ಧವನ್, ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್, ಮಾಜಿ ಬ್ಯಾಟರ್ ವಾಸಿಂ ಜಾಫರ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಆರ್ ಅಶ್ವಿನ್ ಮತ್ತು ರಿಷಭ್ ಪಂತ್ ಕೂಡ ತಂಡಕ್ಕೆ ಶುಭಕೋರಿದ್ದಾರೆ.