ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್, ಈಗ ವಿರಾಟ್ ಕೊಹ್ಲಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಮಗನ ತಂಡದಲ್ಲಿದ್ದ ಹೆಚ್ಚಿನವರು ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಸೇರಿದಂತೆ 'ಬೆನ್ನು-ಇರಿಯುವವರು' ಎಂದು ಹೇಳಿದ್ದಾರೆ. ಇನ್‌ಸೈಡ್‌ಸ್ಪೋರ್ಟ್‌ನೊಂದಿಗೆ ಮಾತನಾಡಿದ ಯೋಗರಾಜ್, ಸಚಿನ್ ತೆಂಡೂಲ್ಕರ್ ಯುವರಾಜ್‌ಗೆ ಇದ್ದ ಏಕೈಕ ಸ್ನೇಹಿತ ಎಂದು ಹೇಳಿದ್ದಾರೆ. ಕೊಹ್ಲಿ ನಾಯಕನಾಗಿ ಯುವರಾಜ್‌ಗೆ ಸಹಾಯ ಮಾಡಿದ್ದಿರಬಹುದೇ? ಎಂದು ಕೇಳಿದಾಗ, ಯೋಗರಾಜ್ ಭಾರತದ ಮಾಜಿ ನಾಯಕನ ಮೇಲೆ ವಾಗ್ದಾಳಿ ನಡೆಸಿದರು, ಅವರ ಮಗ ತಮ್ಮ ಸ್ಥಾನಗಳನ್ನು ಪಡೆಯಬಹುದೆಂದು ಎಲ್ಲರೂ ಹೆದರುತ್ತಿದ್ದರು ಎಂದು ಹೇಳಿದರು.
"ನಾನು ನಿಮಗೆ ಹೇಳಿದಂತೆ, ಯಶಸ್ಸು, ಹಣ ಮತ್ತು ವೈಭವದ ಕ್ಷೇತ್ರದಲ್ಲಿ ಯಾವುದೇ ಸ್ನೇಹಿತರಿಲ್ಲ. ಯಾವಾಗಲೂ ಬೆನ್ನಿಗೆ ಇರಿಯುವವರು, ನಿಮ್ಮನ್ನು ಕೆಳಗಿಳಿಸಲು ಬಯಸುವ ಜನರು ಇರುತ್ತಾರೆ. ಜನರು ಯುವರಾಜ್ ಸಿಂಗ್‌ಗೆ ಹೆದರುತ್ತಿದ್ದರು ಏಕೆಂದರೆ ಯುವರಾಜ್ ಸಿಂಗ್ ಸರ್ವಶಕ್ತ ದೇವರು ಸೃಷ್ಟಿಸಿದ ಮಹಾನ್ ಆಟಗಾರನಾಗಿರುವುದರಿಂದ ಅವರು ತಮ್ಮ ಸ್ಥಾನಗಳನ್ನು ಎಲ್ಲಿ ಕಸಿದುಕೊಳ್ಳುತ್ತಾರೆ ಎಂದು ಹೆದರುತ್ತಿದ್ದರು. ಎಂಎಸ್ ಧೋನಿಯಿಂದ ಹಿಡಿದು, ಎಲ್ಲರಿಗೂ ಯುವರಾಜ್ ಸಿಂಗ್ ನನ್ನ ಕುರ್ಚಿಯನ್ನು ಕಸಿದುಕೊಳ್ಳಬಹುದೆಂಬ ಭಯ ಇತ್ತು' ಎಂದು ಯೋಗರಾಜ್ ಸಿಂಗ್ ಹೇಳಿದ್ದಾರೆ.
ಯುವರಾಜ್ ಅವರಿದ್ದ ತಂಡದ ಆಟಗಾರರ ವಿರುದ್ಧ ಯೋಗರಾಜ್ ಗಂಭೀರ ಆರೋಪಗಳನ್ನು ಹೊರಿಸುತ್ತಿರುವುದು ಇದೇ ಮೊದಲಲ್ಲ. ತಮ್ಮ ಮಗನನ್ನು ಹೇಗೆ ನಿವೃತ್ತಿಗೊಳಿಸಲಾಯಿತು ಎಂಬುದನ್ನು ಅವರು ಪದೇ ಪದೇ ಪುನರುಚ್ಚರಿದ್ದು ತಂಡದ ಇತರ ಸದಸ್ಯರ ವಿರುದ್ಧವೂ ಗಂಭೀರ ಆರೋಪ ಹೊರಿಸಿದ್ದರು.
2000-2017ರ ಅವಧಿಯಲ್ಲಿ 402 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯುವರಾಜ್ ಭಾರತವನ್ನು ಪ್ರತಿನಿಧಿಸಿದ್ದರು. 35.05 ಸರಾಸರಿಯಲ್ಲಿ 11,178 ರನ್ ಗಳಿಸಿದ್ದರು. 17 ಶತಕಗಳು ಮತ್ತು 71 ಅರ್ಧಶತಕಗಳನ್ನು ಗಳಿಸಿದ್ದರು. 2002 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ಶ್ರೀಲಂಕಾ ಜೊತೆ ಜಂಟಿ ವಿಜೇತರು), 2007 ರಲ್ಲಿ ಐಸಿಸಿ ಟಿ20 ವಿಶ್ವಕಪ್ ಮತ್ತು 2011 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು.
2007 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ವಿಶ್ವಕಪ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಯುವರಾಜ್ ಸಿಂಗ್ ಪಾತ್ರರಾಗಿದ್ದರು. 2011 ರ ವಿಶ್ವಕಪ್‌ನಲ್ಲಿ 'ಟೂರ್ನಮೆಂಟ್‌ನ ಆಟಗಾರ' ಎಂಬ ಗೌರವ ಅವರ ವೃತ್ತಿಜೀವನದ ಅತ್ಯುನ್ನತ ಸಾಧನೆಯಾಗಿತ್ತು, ಒಂಬತ್ತು ಪಂದ್ಯಗಳಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 362 ರನ್ ಗಳಿಸಿ 15 ವಿಕೆಟ್‌ಗಳನ್ನು ಕಬಳಿಸಿದ್ದರು.