ಸಾಮಾಜಿಕ ಮಾಧ್ಯಮ ಪ್ರಭಾವಿ ಸಪ್ನಾ ಗಿಲ್ ಸಲ್ಲಿಸಿದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಉತ್ತರ ಸಲ್ಲಿಸಲು ವಿಫಲವಾದ ಕಾರಣ ಭಾರತೀಯ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರಿಗೆ 100 ರೂ. ದಂಡ ವಿಧಿಸಲಾಗಿದೆ. 2024ರ ಏಪ್ರಿಲ್‌ನಲ್ಲಿ ದಿನೋಶಿ ಸೆಷನ್ಸ್ ನ್ಯಾಯಾಲಯದಲ್ಲಿ ಹಿಂದಿನ ಮ್ಯಾಜಿಸ್ಟ್ರೇಟ್ ಆದೇಶದ ವಿರುದ್ಧ ಗಿಲ್ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದರು. ಶಾ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಪ್ರಾಥಮಿಕ ತನಿಖೆಗೆ ಆದೇಶಿಸಿತ್ತು. ಪ್ರಕರಣದಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಪೃಥ್ವಿ ಅವರಿಗೆ ಸೂಚಿಸಲಾಗಿತ್ತು. ಆದರೆ, ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 100 ರೂ.ಗಳ ಟೋಕನ್ ಶುಲ್ಕದ ಮೂಲಕ ಉತ್ತರ ಸಲ್ಲಿಸಲು ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಸಪ್ನಾ ಗಿಲ್ ಅವರ ವಕೀಲರಾಗಿರುವ ಅಲಿ ಕಾಶಿಫ್ ಖಾನ್, ಶಾ ನ್ಯಾಯಾಂಗ ಪ್ರಕ್ರಿಯೆಯನ್ನು ತಪ್ಪಿಸುತ್ತಿದ್ದಾರೆ. ಹಲವು ಬಾರಿ ಸಮನ್ಸ್ ನೀಡಿದ್ದರೂ, ಪ್ರಕರಣವನ್ನು ನಿರ್ವಹಿಸುವ ಅವರ ನಿಯಮಿತ ವಿಧಾನ ಇದು ಎಂದು ಆರೋಪಿಸಿದರು.
2023ರಲ್ಲಿ ಮುಂಬೈನಲ್ಲಿ ನಡೆದ ಸಾರ್ವಜನಿಕ ವಾಗ್ವಾದದ ನಂತರ ಸಪ್ನಾ ಗಿಲ್, ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸಿದರು. ಶಾ ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದರು. ನನ್ನ ಸ್ನೇಹಿತನ ಫೋನ್ ಕಸಿದುಕೊಂಡರು ಮತ್ತು ನಾನು ಮಧ್ಯೆಪ್ರವೇಶಿಸಿದಾಗ ತನ್ನ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಗಿಲ್ ಆರೋಪಿಸಿದ್ದಾರೆ. ಈ ವಿಚಾರವಾಗಿ ಗಿಲ್ ಪೊಲೀಸರನ್ನು ಸಂಪರ್ಕಿಸಿದರೂ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಆದೇಶಿಸಿತು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಗಿಲ್ ಅವರ ಸ್ನೇಹಿತ ಶೋಬಿತ್ ಠಾಕೂರ್ ಪೃಥ್ವಿ ಶಾ ಅವರೊಂದಿಗೆ ವಾಗ್ವಾದಕ್ಕಿಳಿದರು. ಪೃಥ್ವಿ ತನ್ನ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ಅವರೊಂದಿಗೆ ಹೊರಟಾಗ ಅವರನ್ನು ಹಿಂಬಾಲಿಸಿ ದಾರಿ ಮಧ್ಯೆ ಅಡ್ಡ ಹಾಕಿ ಕಾರಿನ ಗಾಜು ಒಡೆದಿದ್ದರು.
ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಲಾಗಿದೆ ಎಂದು ಠಾಕೂರ್ ದೂರಿದ್ದಾರೆ. ಮತ್ತೊಂದೆಡೆ, ಯಾದವ್ ಅವರು ಠಾಕೂರ್ ಮತ್ತು ಗಿಲ್ ಸೇರಿದಂತೆ ಆರು ಜನರು ನಮ್ಮ ಬೆನ್ನಟ್ಟಿದ್ದರು ಎಂದು ಆರೋಪಿಸಿದ್ದಾರೆ. ಪೊಲೀಸರು ಸಪ್ನಾ ಗಿಲ್ ವಿರುದ್ಧ ಪ್ರಕರಣ ದಾಖಲಿಸಿದರು ಮತ್ತು ಮೂರು ದಿನಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.