ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2025ರ ಪಂದ್ಯದ ನಂತರ ಎದುರಾಳಿ ಆಟಗಾರರಿಗೆ ಹ್ಯಾಂಡ್‌ಶೇಕ್ ನೀಡಲು ಟೀಂ ಇಂಡಿಯಾ ನಿರಾಕರಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ, ಪಾಕಿಸ್ತಾನದ ಅಭಿಮಾನಿಯೊಬ್ಬರು, 2025ರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಮುಂದಿನ ಪಂದ್ಯವನ್ನು ಬಹಿಷ್ಕರಿಸಿ ಎಂದು ಭಾರತ ತಂಡವನ್ನು ಕೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪಾಕಿಸ್ತಾನ ವಿರುದ್ಧ ಏಳು ವಿಕೆಟ್‌ಗಳ ಜಯಗಳಿಸಿದ ನಂತರ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಭಾರತೀಯ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರ ಕುಟುಂಬಗಳೊಂದಿಗೆ ಒಗ್ಗಟ್ಟು ತೋರಿಸುವ ಒಂದು ಮಾರ್ಗ ಎಂದು ಸೂರ್ಯಕುಮಾರ್ ಈ ಕ್ರಮವನ್ನು ಸಮರ್ಥಿಸಿಕೊಂಡರು. ಟೂರ್ನಮೆಂಟ್‌ನ ಸೂಪರ್ 4 ಹಂತವನ್ನು ತಲುಪಿದರೆ, ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗಬಹುದು.
ಭಾರತ ತಂಡ ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯವನ್ನು ಬಹಿಷ್ಕರಿಸಿದರೂ ಕೂಡ, ಏಷ್ಯಾ ಕಪ್ ಫೈನಲ್‌ನಲ್ಲಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಬಹುದು. ತನ್ನ ತಂಡವು ಭಾರತಕ್ಕೆ ಸರಿಸಾಟಿಯಲ್ಲ ಎಂದು ಆ ವ್ಯಕ್ತಿ ಒಪ್ಪಿಕೊಂಡರೂ, ಒಬ್ಬ ಅಭಿಮಾನಿಯಾಗಿ, ತನ್ನ ತಂಡವು ಫೈನಲ್‌ನಲ್ಲಿ ಸೋತರೂ ಸಹ ನಾನು ಆನಂದಿಸುತ್ತೇನೆ ಎಂದರು.
'ನೀವು ಭಾರತೀಯ ಮಾಧ್ಯಮದವರೇ? ಪಾಕಿಸ್ತಾನಿ ಅಭಿಮಾನಿಯಾಗಿ, ಮುಂದಿನ ಪಂದ್ಯವನ್ನು ಬಹಿಷ್ಕರಿಸುವಂತೆ ನಾನು ಭಾರತವನ್ನು ವಿನಂತಿಸುತ್ತೇನೆ. ಇದರಿಂದ ಪಾಕಿಸ್ತಾನಕ್ಕೆ 2 ಅಂಕಗಳು ಸಿಗುತ್ತವೆ ಮತ್ತು ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಧನ್ಯವಾದಗಳು!' ಎಂದು ಅಭಿಮಾನಿ ವೈರಲ್ ವಿಡಿಯೋದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ.
'ನಮ್ಮ ಸದ್ಯದ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಲು ಸಹ ಸಾಧ್ಯವಿಲ್ಲ. ಆದ್ದರಿಂದ, ಭಾರತವು ಮುಂದಿನ ಪಂದ್ಯವನ್ನು ಬಹಿಷ್ಕರಿಸುವಂತೆ ನಾನು ವಿನಂತಿಸುತ್ತೇನೆ. ಆಗ ನಾವು ಫೈನಲ್ ತಲುಪಿದರೆ ನಮಗೆ ಸಂತೋಷವಾಗುತ್ತದೆ' ಎಂದಿದ್ದಾರೆ.
ಭಾರತ ತಂಡವು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಎದುರಿಸಬಹುದು ಎಂದು ನೆನಪಿಸಿದ ನಂತರ, ಅವರು, 'ಮೊದಲು ಫೈನಲ್ ತಲುಪೋಣ, ನಂತರ ಏನಾಗುತ್ತದೆ ಎಂದು ನೋಡೋಣ' ಎಂದಿದ್ದಾರೆ.
ಟೂರ್ನಮೆಂಟ್‌ನ ಉಳಿದ ಭಾಗದಲ್ಲಿ ಎರಡೂ ತಂಡಗಳು ಇನ್ನೂ ಎರಡು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ಆಗಲೂ ಭಾರತ 'ಹ್ಯಾಂಡ್‌ಶೇಕ್' ನಿರಾಕರಿಸುವ ಸಾಧ್ಯತೆ ಇದೆ.
ಸೋಮವಾರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್‌ನಿಂದ ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿತು. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ ಅವರು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ. ಅವರ ವಿರುದ್ಧ ಪಿಸಿಬಿ ಐಸಿಸಿಗೆ ಔಪಚಾರಿಕ ದೂರು ನೀಡಿದೆ.
ಜಿಂಬಾಬ್ವೆಯ ಮಾಜಿ ಆಟಗಾರರಾಗಿರುವ 69 ವರ್ಷದ ಪೈಕ್ರಾಫ್ಟ್ ಪಂದ್ಯದ ಕೊನೆಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. ಆದರೆ, ಭಾರತೀಯ ಆಟಗಾರರು ಎದುರಾಳಿ ತಂಡದೊಂದಿಗೆ ಕೈಕುಲುಕಲಿಲ್ಲ. ಇದು ವಿವಾದಕ್ಕೆ ಕಾರಣವಾಯಿತು.