ಭಾರತ ಮತ್ತು ಪಾಕಿಸ್ತಾನ ನಡುವಿನ 2025ರ ಏಷ್ಯಾ ಕಪ್ ಪಂದ್ಯದ ನಂತರ ಭಾರತೀಯ ಆಟಗಾರರು ಪಾಕ್ ತಂಡದ ಆಟಗಾರರೊಂದಿಗೆ ಕೈಕುಲುಕದಿದ್ದದ್ದು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಕ್ರಿಕೆಟ್ ಪಂದ್ಯದ ಕೊನೆಯಲ್ಲಿ ಎದುರಾಳಿ ತಂಡದೊಂದಿಗೆ ಕೈಕುಲುಕುವುದು ಕೇವಲ ಸದ್ಭಾವನೆಯ ಸೂಚಕವಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಕ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಟೀಂ ಇಂಡಿಯಾ ಆಟಗಾರರು ಪಂದ್ಯದ ನಂತರವೂ, ತಮ್ಮ ಎದುರಾಳಿಯೊಂದಿಗೆ ಕೈಕುಲುಕಲಿಲ್ಲ.
ಈ ಘಟನೆಯಿಂದ ಕೋಪಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗೆ ಅಧಿಕೃತ ದೂರು ನೀಡಲು ನಿರ್ಧರಿಸಿತು. ಆದಾಗ್ಯೂ, ಭಾರತ ಮಾಡಿರುವುದು ತಪ್ಪಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪಂದ್ಯದ ಕೊನೆಯಲ್ಲಿ ಆಟಗಾರರು ಕೈಕುಲುಕಬೇಕೆಂದು ಒತ್ತಾಯಿಸುವ ಯಾವುದೇ ಕಾನೂನು ಇಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯನ್ನು ಗಮನಿಸಿದರೆ, ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕೈಕುಲುಕುವುದರಲ್ಲಿ ಅಥವಾ ಪಾಕಿಸ್ತಾನ ಕ್ರಿಕೆಟಿಗರೊಂದಿಗೆ ಯಾವುದೇ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
'ನೋಡಿ, ನೀವು ನಿಯಮ ಪುಸ್ತಕವನ್ನು ಓದಿದರೆ, ಎದುರಾಳಿ ತಂಡದೊಂದಿಗೆ ಕೈಕುಲುಕುವ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆಯಿಲ್ಲ. ಇದು ಜಾಗತಿಕವಾಗಿ ಕ್ರೀಡಾ ಕ್ಷೇತ್ರದಾದ್ಯಂತ ಅನುಸರಿಸಲಾಗುವ ಕಾನೂನಲ್ಲ, ಸದ್ಭಾವನೆಯ ಸೂಚಕ ಮತ್ತು ಒಂದು ರೀತಿಯ ಸಂಪ್ರದಾಯವಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಹೇಳಿದರು.
'ಯಾವುದೇ ಕಾನೂನು ಇಲ್ಲದಿದ್ದಾಗ, ಭಾರತೀಯ ಕ್ರಿಕೆಟ್ ತಂಡವು ಹದಗೆಟ್ಟ ಸಂಬಂಧದ ಇತಿಹಾಸ ಹೊಂದಿರುವ ಎದುರಾಳಿ ಪಕ್ಷದೊಂದಿಗೆ ಕೈಕುಲುಕಲು ಬದ್ಧವಾಗಿಲ್ಲ' ಎಂದು ಅವರು ಹೇಳಿದರು.
'ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳನ್ನು ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಐಸಿಸಿಗೆ ದೂರು ನೀಡಿದ್ದು, ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿದೆ' ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.