ದುಬೈ: ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನವನ್ನು 6 ವಿಕೆಟ್ ಅಂತರದಿಂದ ಬಗ್ಗುಬಡಿದ್ದ ನಂತರ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್,ಗಾಯದ ಮೇಲೆ ಉಪ್ಪು ಸುರಿದರು.
ಉಭಯ ರಾಷ್ಟ್ರಗಳ ನಡುವಿನ ಸ್ಪರ್ಧೆಯನ್ನು ಸಾಂಪ್ರಾದಾಯಿಕ ಎದುರಾಳಿಗಳು ಎಂದು ಕರೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಭಾರತ ಮತ್ತು ಪಾಕಿಸ್ತಾನವು T20I ಗಳಲ್ಲಿ 15 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತ 12 ಬಾರಿ ಗೆದ್ದಿದೆ.
ಉಭಯ ರಾಷ್ಟ್ರಗಳ ನಡುವಿನ ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸವಿದೆಯೇ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ನಗುತ್ತಲೇ ಪ್ರತಿಕ್ರಿಯಿಸಿದ ಸೂರ್ಯಕುಮಾರ್, "ಸರ್, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಎದುರಾಳಿಗಳು ಎನ್ನುವುದನ್ನು ನಾವು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ನಾನು ಗುಣಮಟ್ಟವನ್ನು ಉಲ್ಲೇಖಿಸಿದ್ದು, ಪೈಪೋಟಿಯಲ್ಲ" ಎಂದು ಪತ್ರಕರ್ತ ಹೇಳಿದಾಗ ಸೂರ್ಯ ಕುಮಾರ್ ಯಾದವ್ ವ್ಯಂಗ್ಯವಾಗಿ ನಕ್ಕರು. "ಸರ್, ಎದುರಾಳಿ, ಗುಣಮಟ್ಟ ಎಲ್ಲವೂ ಒಂದೇ. ಈಗ ಎದುರಾಳಿ ಅಂದ್ರೆ ಏನು ಅರ್ಥ? ಎರಡು ತಂಡಗಳು 15 ಪಂದ್ಯಗಳನ್ನು ಆಡಿ 8-7 ಗೆದಿದ್ದರೆ ಅದು ಎದುರಾಳಿ. ಇಲ್ಲಿ ಅದು 13-1 (12-3) ಅಥವಾ ಇನ್ನಾವುದೇ ರೀತಿಯಲ್ಲಿ ಗೆದ್ದಿಲ್ಲವಲ್ಲ ಎಂದು ನಗುತ್ತಲೇ ಸೂರ್ಯ ಕುಮಾರ್ ಯಾದವ್ ಹೇಳಿದರು.
ಅಭಿಷೇಕ್ ಮತ್ತು ಶುಭಮನ್ ಗಿಲ್ 9.5 ಓವರ್‌ಗಳಲ್ಲಿ ಆರಂಭಿಕವಾಗಿ 105 ರನ್ ಗಳಿಸಿದ್ದರಿಂದ ಭಾರತ ಉತ್ತಮ ಕ್ರಿಕೆಟ್ ಆಡಿತು. ಪಾಕಿಸ್ತಾನಕ್ಕಿಂತ ನಾವು ಅತ್ಯುತ್ತಮರು ಅನಿಸುತ್ತದೆ. ಬೌಲಿಂಗ್ ನಲ್ಲೂ ನಾವು ಚೆನ್ನಾಗಿ ಮಾಡಿದ್ದೇವೆ ಎಂದ ಸೂರ್ಯ ಕುಮಾರ್ ಯಾದವ್, ಅಭಿಷೇಖ್ ಶರ್ಮಾ ಅವರ ಪ್ರತಿಭೆಯನ್ನು ಹಾಡಿ ಹೊಗಳಿದರು.