ನವದೆಹಲಿ: ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದ ಬಳಿಕ ಭಾರತೀಯ ಆಟಗಾರರ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ 19 ಎಸೆತಗಳಲ್ಲಿ ಸ್ಪೋಟಕ 30 ರನ್ ಗಳಿಸಿದ ತಿಲಕ್ ವರ್ಮಾ ಅವರಿಗೆ 'ಇಂಪ್ಯಾಕ್ಟ್ ಪ್ಲೇಯರ್' ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿ ಸಮಾರಂಭದ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ತಂಡದ ಕೋಚ್ ಗೌತಮ್ ಗಂಭೀರ್ 'ಇಂಪ್ಯಾಕ್ಟ್ ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಘೋಷಿಸುವಂತೆ ತಂಡದ ಸಹಾಯಕ ಸಿಬ್ಬಂದಿಯಾಗಿರುವ ಕನ್ನಡಿಗ ರಾಘವೇಂದ್ರ ದಿವಗಿ ಅವರಿಗೆ ಸೂಚಿಸುತ್ತಾರೆ. ಆಗ ದಿವಗಿ ಅವರು ತಿಲಕ್ ವರ್ಮಾ ಅವರ ಹೆಸರನ್ನು ತೆಗೆದುಕೊಳ್ಳುತ್ತಾರೆ.
ಈ ಪದಕಕ್ಕೆ ಕೊರಳೊಡ್ಡುವ ಮುನ್ನ ತಿಲಕ್ ಅವರು ದಿವಗಿ ಕಾಲಿಗೆ ಬೀಳಲು ಮುಂದಾಗುತ್ತಾರೆ. ಇದೊಂದು ಭಾವನಾತ್ಮಕ ಹೃದಯ ಸ್ಪರ್ಶಿ ಕ್ಷಣದಂತಿದ್ದು, ತಿಲಕ್ ವರ್ಮಾ ಕೂಡಾ ದಿವಗಿ ಹಾಗೂ ತಂಡದ ಸಹ ಆಟಗಾರರಿಗೆ ಧನ್ಯವಾದ ಸಲ್ಲಿಸುತ್ತಾರೆ.
"ಕಳೆದ ಎರಡು ಬಾರಿ ಆಗಿದಂತೆ ಪಂದ್ಯವನ್ನು ಬೇಗ ಮುಗಿಸುವ ಬಗ್ಗೆ ಯೋಚಿಸುತ್ತಿದ್ದೆ, ಆದರೆ ಸಾಧ್ಯವಾಗಲಿಲ್ಲ. ತಂಡಕ್ಕಾಗಿ ಆಡಿದ್ದೇನೆ. ನನ್ನ ಪ್ರಯತ್ನಗಳು ಯಾವಾಗಲೂ ಇರುತ್ತದೆ. ಗೌತಿ ಸರ್ ಹೇಳಿದಂತೆ, ವಿಶ್ವಕಪ್ ತನಕ ನಾವು ಕಲಿಯುತ್ತಲೇ ಇರುತ್ತೇವೆ ಮತ್ತು ಮುಂದೆ ಸಾಗುತ್ತೇವೆ" ಎಂದು ವರ್ಮಾ ಹೇಳಿದರು.
ಕನ್ನಡಿಗ ರಾಘವೇಂದ್ರ ದಿವಗಿ! ಮೂಲತ: ಉತ್ತರ ಕನ್ನಡ ಜಿಲ್ಲೆ ಕುಮಟಾದ ರಾಘವೇಂದ್ರ ದಿವಗಿ, 2011 ರಿಂದಲೂ ಭಾರತೀಯ ಕ್ರಿಕೆಟ್ ತಂಡದ ಥ್ರೋ ಡೌನ್ ಸ್ಪೆಷಲಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಟರ್ ಗಳಿಗೆ ಅಭ್ಯಾಸ್ ನೀಡುವ ಮೂಲಕ ಅವರ ಕೌಶಲ್ಯ ಹೆಚ್ಚಿಸುವುದು ದಿವಗಿ ಅವರ ಕೆಲಸವಾಗಿದೆ.