ಲಖನೌ: ಉತ್ತರ ಪ್ರದೇಶದ ಲಖನೌದಲ್ಲಿ ಶುಕ್ರವಾರ ನಡೆದ ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬಿ ಸಾಯಿ ಸುದರ್ಶನ್ ಅವರ ಅಮೋಘ ಶತಕಗಳ ನೆರವಿನಿಂದ ಭಾರತ ಎ ತಂಡವು ಆಸ್ಟ್ರೇಲಿಯಾ ನೀಡಿದ್ದ 413 ರನ್ ಗಳ ಟಾರ್ಗೆಟ್ ನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿದೆ.
ಐದು ವಿಕೆಟ್ ಗಳ ಭರ್ಜರಿ ಗೆಲುವಿನೊಂದಿಗೆ 1-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಆರನೇ ಬಾರಿಗೆ ಅತ್ಯಂತ ಹೆಚ್ಚಿನ ರನ್ ಚೇಸಿಂಗ್ ಮಾಡಿದ ಪಂದ್ಯ ಇದಾಗಿದೆ.
ರಾಹುಲ್ 210 ಎಸೆತಗಳಲ್ಲಿ 16 ಬೌಂಡರಿ ಮತ್ತು 4 ಸಿಕ್ಸರ್ ಗಳೊಂದಿಗೆ ಅಜೇಯ 176 ರನ್ ಗಳಿಸುವ ಮೂಲಕ ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಉಳಿದಂತೆ ಸಾಯಿ ಸುದರ್ಶನ್ 172 ಎಸೆತಗಳಲ್ಲಿ ಶತಕ ಗಳಿಸಿದರೆ, ನಾಯಕ ಧ್ರುವ್ ಜುರೆಲ್ (56) ರನ್ ಗಳೊಂದಿಗೆ ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿತು. ಆದರೆ ತಂಡದ ಮೊತ್ತ 382 ಆಗಿದ್ದಾಗ ಜುರೆಲ್ ಔಟಾದರು.
ತದನಂತರ ರಾಹುಲ್ ಹಾಗೂ ನಿತೀಶ್ ಕುಮಾರ್ ರೆಡ್ಡಿ (ಅಜೇಯ 16) ನೆರವಿನಿಂದ ಟೀ ವಿರಾಮಕ್ಕೂ ಮುನ್ನ ಭಾರತ ಎ ತಂಡ 412 ರನ್ ಚೇಸಿಂಗ್ ಮಾಡುವ ಮೂಲಕ ಗೆಲುವು ಸಾಧಿಸಿತು