ದುಬೈ: ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿಯ ಭಾರತ ಮತ್ತು ಶ್ರೀಲಂಕಾ ನಡುವಿನ ಪಂದ್ಯ ರಣ ರೋಚಕವಾಗಿ ಅಂತ್ಯಕಂಡಿದ್ದು, ಕೊನೆಯ ಓವರ್ ಹೈಡ್ರಾಮಾ ಯಾವುದೇ ಟೂರ್ನಿಯ ಫೈನಲ್ ಗೂ ಕಡಿಮೆ ಇರಲಿಲ್ಲ.
ಈಗಾಗಲೇ ಭಾರತ ಫೈನಲ್ ಪ್ರವೇಶ ಮಾಡಿದ್ದರಿಂದ ಶ್ರೀಲಂಕಾ ವಿರುದ್ಧದ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲದಿದ್ದರೂ ಉಭಯ ತಂಡಗಳು ಗೆಲುವಿಗಾಗಿ ಕೊನೆಯ ಎಸೆತದವರೆಗೂ ಹೋರಾಟ ನಡೆಸಿದ್ದು ಪ್ರೇಕ್ಷಕರಿಗೆ ರಸದೌತಣ ನೀಡಿತು. ಪ್ರಮುಖವಾಗಿ ಪಂದ್ಯದ ಕೊನೆಯ ಓವರ್ ನಲ್ಲಿ ಶ್ರೀಲಂಕಾ ಗೆದ್ದೇ ಬಿಟ್ಟಿತು ಎನ್ನುವಾಗಲೇ ರೋಚಕ ಟ್ವಿಸ್ಟ್ ಎದುರಾಗಿತ್ತು.
ಹೌದು.. ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಜಯ ಸಾಧಿಸಿದೆ. ಅದು ಸಹ ಸೂಪರ್ ಓವರ್‌ನಲ್ಲಿ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 202 ರನ್ ಕಲೆಹಾಕಿದ್ದರು.
203 ರನ್ ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಕೂಡ 202 ರನ್ ಗಳಿಸಿ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತ್ತು. ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ ತಂಡ ಕಲೆಹಾಕಿದ್ದು ಕೇವಲ 2 ರನ್ ಮಾತ್ರ. ಅದರಂತೆ 3 ರನ್ ಗಳ ಗುರಿ ಪಡೆದ ಟೀಮ್ ಇಂಡಿಯಾ ಮೊದಲ ಎಸೆತದಲ್ಲೇ ಮೂರು ರನ್ ಓಡಿ ಪಂದ್ಯವನ್ನು ಗೆದ್ದುಕೊಂಡಿತು.
ರನೌಟ್ ವಿವಾದ, ಔಟ್ ಆಗಿದ್ದರೂ ನಾಟೌಟ್ ಕೊಟ್ಟಿದ್ದೇಕೆ?
ಆದರೆ ಈ ಸೂಪರ್ ಓವರ್ನ ನಾಲ್ಕನೇ ಎಸೆತದಲ್ಲಿ ದಸುನ್ ಶನಕ ರನೌಟ್ ಆಗಿದ್ದರು. ಅರ್ಷದೀಪ್ ಸಿಂಗ್ ಎಸೆದ ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಶನಕ ರನ್ ಓಡಲು ಮುಂದಾಗಿದ್ದರು.
ಈ ವೇಳೆ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಚೆಂಡನ್ನು ವಿಕೆಟ್ಗೆ ಎಸೆದು ರನೌಟ್ ಮಾಡಿದರು. ಅದೇ ಸಂದರ್ಭದಲ್ಲಿ ಬೌಲರ್ ಅರ್ಶ್ ದೀಪ್ ಸಿಂಗ್ ಕ್ಯಾಚ್ ಔಟ್ ಗೆ ಮನವಿ ಮಾಡಿದರು. ಇತ್ತ ಅರ್ಷದೀಪ್ ಸಿಂಗ್ ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ನೀಡಿದರು.
ಆದರೆ ಈ ವೇಳೆ ಶನಕ ಡಿಆರ್ಎಸ್ ಕೇಳಿದರು. ಮೂರನೇ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್ಗೆ ತಗುಲಿಲ್ಲ ಎಂಬುದು ಸ್ಪಷ್ಟವಾಗಿತ್ತು. ಕ್ಯಾಚ್ ಔಟ್ ಅಲ್ಲ.. ಬದಲಿಗೆ ನಾಟೌಟ್ ಎಂದು ತೀರ್ಪು ನೀಡಲಾಯಿತು.
ಶನಕ ನಾಟೌಟ್.. ಏನಿದು ಡೆಡ್ ಬಾಲ್ ನಿಯಮ?
ಆದರೆ ಅತ್ತ ದಸುನ್ ಶಾನಕ ಕ್ಲಿಯರ್ ರನೌಟ್ ಆಗಿದ್ದರು. ಇದಾಗ್ಯೂ ಅಂಪೈರ್ ಅದನ್ನು ಔಟ್ ಎಂದು ಪರಿಗಣಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಬಾಲ್ ಡೆಡ್ ಆಗಿರುವುದು.
ಐಸಿಸಿ ನಿಯಮಗಳ ಪ್ರಕಾರ, ಅಂಪೈರ್ ಔಟ್ ನೀಡಿದ ತಕ್ಷಣ ಚೆಂಡನ್ನು ಡೆಡ್ ಎಂದು ಪರಿಗಣಿಸಲಾಗುತ್ತದೆ. ಇತ್ತ ಫೀಲ್ಡ್ ಅಂಪೈರ್ ಕ್ಯಾಚ್ ಔಟ್ ನೀಡಿದ್ದರಿಂದ ಸಂಜು ಸ್ಯಾಮ್ಸನ್ ಮಾಡಿದ ರನೌಟ್ ಅನ್ನು ಅನೂರ್ಜಿತವೆಂದು ಪರಿಗಣಿಸಲಾಗಿದೆ. ಹೀಗಾಗಿಯೇ ದಸುನ್ ಶಾನಕ ರನೌಟ್ ಆಗಿದ್ದರೂ, ಅಂಪೈರ್ ಔಟ್ ನೀಡಿರಲಿಲ್ಲ.
ಒಟ್ಟಾರೆ ಅರ್ಶ್ ದೀಪ್ ಸಿಂಗ್ ಔಟ್ ಕೇಳಿದ್ದು, ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು, ಬಳಿಕ ರನೌಟ್ ಆಗಿದ್ದರೂ ಶನಕ ಡಿಆರ್ ಎಸ್ ಕೇಳಿದ್ದು ಎಲ್ಲವೂ ಸಿನಿಮಾದಂತೆ ರೋಚಕ ತಿರುವುಗಳನ್ನು ಪಡೆಯಿತು.