ದುಬೈ: ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2025 ಟೂರ್ನಿಯ ರಣರೋಚಕ ಹೈ ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಬಗ್ಗುಬಡಿದ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು.
ಭಾರತ ಪರ ಆಕರ್ಷಕ ಅರ್ಧ ಶತಕ ಭಾರಿಸಿದ ತಿಲಕ್ ವರ್ಮಾ ತಂಡ ಏಷ್ಯಾ ಕಪ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಂದು ಹಂತದಲ್ಲಿ ಬೇಗನೆ ವಿಕೆಟ್ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ತಂಡಕ್ಕೆ ತಿಲಕ್ ವರ್ಮಾ (69) ಹಾಗೂ ಸಂಜು ಸ್ಯಾಮ್ಸನ್ 24, ಶಿವಂ ದುಬೆ ಆಸರೆಯಾದರು.
ಪಾಕಿಸ್ತಾನ ನೀಡಿದ 147 ರನ್ ಗಳ ಗುರಿಯನ್ನು ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ಗಳೊಂದಿಗೆ ಭಾರತ ಭರ್ಜರಿ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 146 ರನ್ ಗಳಿಗೆ ಆಲೌಟ್ ಆಯಿತು. ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 146 ರನ್ ಗಳಿಗೆ ಪಾಕಿಸ್ತಾನ ತಂಡವನ್ನು ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು.
ಭಾರತದ ಪರ ಕುಲದೀಪ್ ಯಾದವ್ ಒಂದೇ ಓವರ್ ನಲ್ಲಿ ಮೂರು ವಿಕೆಟ್ ಸೇರಿದಂತೆ ಒಟ್ಟಾರೇ 4 ವಿಕೆಟ್ ಪಡೆದರು. ಉಳಿದಂತೆ ಅಕ್ಷರ್ ಪಟೇಲ್ , ವರುಣ್ ಚಕ್ರವರ್ತಿ, ಬೂಮ್ರಾ ತಲಾ 2 ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನ ತಂಡ 150 ರ ಗಡಿ ದಾಟದಂತೆ ಅತ್ಯುತ್ತಮ ಬೌಲಿಂಗ್ ಮಾಡಿದರು.
ಪಾಕಿಸ್ತಾನ ನೀಡಿದ 147 ರನ್ ಗಳ ಗುರಿ ಬೆನ್ನಟ್ಟಿದ್ದ ಭಾರತದ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 5 ರನ್ ಗಳಿಗೆ ಅನಗತ್ಯ ಶಾಟ್ ಹೊಡೆಯಲು ಹೋಗಿ ಬೇಗನೆ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಬಳಿಕ ಶುಭಮನ್ ಗಿಲ್ ಕೂಡಾ 12 ರನ್ ಗಳಿಗೆ ಫಹೀಮ್ ಅಶ್ರಫ್ ಬೌಲಿಂಗ್ ಕ್ಯಾಚ್ ನೀಡಿ ನಿರ್ಗಮಿಸಿದರು.
ನಾಯಕ ಸೂರ್ಯ ಕುಮಾರ್ ಯಾದವ್ ಕೇವಲ 1 ರನ್ ಗಳಿಗೆ ಬಿ. ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಔಟಾಗುವುದರೊಂದಿಗೆ ಭಾರತ ಗೆಲ್ಲುವ ಕನಸನ್ನು ಬಹುತೇಕರು ಕೈ ಬಿಟ್ಟಿದ್ದರು. ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ (69) ಹಾಗೂ ಸಂಜು ಸ್ಯಾಮ್ಸನ್ 24, ಶಿವಂ ದುಬೆ (33) ರಿಂಕ್ ಸಿಂಗ್ (4) ರನ್ ಗಳಿಸುವ ಮೂಲಕ ಇನ್ನೂ 2 ಎಸೆತ ಬಾಕಿ ಇರುವಂತೆಯೇ 150 ರನ್ ಗಳಿಸುವುದರೊಂದಿಗೆ ಭಾರತ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಪಾಕಿಸ್ತಾನ ಪರ ಆರಂಭಿಕ ಆಟಗಾರರಾದ ಸಾಹಿಬ್ಜಾದ ಫರ್ಹನ್ 57, ಫಾಕರ್ ಜಮಾನ್ 46 ರನ್ ಗಳಿಸುವ ಮೂಲಕ ತಂಡ 140 ರ ಗಡಿ ದಾಟುವಂತೆ ಮಾಡಿದರು. ಸಾಯಿಬ್ ಅಯುಬ್ 14 ರನ್ ಗಳಿಸಿದದ್ದು ಹೊರತುಪಡಿಸಿದರೆ ಉಳಿದಂತೆ ಯಾವುದೇ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಭಾರತದ ಬೌಲರ್ ಗಳ ವೇಗಕ್ಕೆ ತತ್ತರಿಸಿ ಬೇಗನೆ ಫೆವಿಲಿಯನ್ ಸೇರಿದರು.