ಏಷ್ಯಾ ಕಪ್ 2025ರ ಪಂದ್ಯಾವಳಿಯಲ್ಲಿ ವಿಶೇಷವಾಗಿ ಭಾರತ ವಿರುದ್ಧ ಪಾಕಿಸ್ತಾನದ ನಡುವಿನ ಪ್ರತಿ ಪಂದ್ಯದಲ್ಲೂ ವಿವಾದಗಳು ಹೆಚ್ಚಾಗಿವೆ. ಮೊದಲ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಅವರ ಸನ್ನೆಗಳ ನಂತರ, ಹ್ಯಾಂಡ್‌ಶೇಕ್ ವಿವಾದ ಕೇಳಿಬಂತು. ಪಾಕ್ ವಿರುದ್ಧದ ಏಷ್ಯಾಕಪ್ ಗೆಲುವಿನ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿತು. ಏಕೆಂದರೆ, ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥರು ಮತ್ತು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿದ್ದಾರೆ.
ಈಗ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಭಾರತವು ಪಾಕಿಸ್ತಾನವನ್ನು ಅಗೌರವಿಸುವುದಲ್ಲದೆ, ಕ್ರಿಕೆಟ್ ಅನ್ನು ಸಹ ಗೌರವಿಸುವುದಿಲ್ಲ ಎಂದು ಟೀಕಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಖಾಸಗಿಯಾಗಿ ನನ್ನೊಂದಿಗೆ ಕೈಕುಲುಕಿದರು ಆದರೆ, ಕ್ಯಾಮೆರಾಗಳ ಮುಂದೆ ಹಾಗೆ ಮಾಡಲಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಮೆಂಟ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಆದರೆ, ಎರಡೂ ತಂಡಗಳ ಆಟಗಾರರ ನಡುವೆ ಸಾಂಪ್ರದಾಯಿಕ ಹಸ್ತಲಾಘವ ಇರಲಿಲ್ಲ. ಮೊದಲ ಪಂದ್ಯದ ನಂತರ ಭಾರತ ತಂಡವು ಎದುರಾಳಿ ತಂಡದ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಅನ್ನು ನಿರಾಕರಿಸಿತು ಮತ್ತು ಉಳಿದೆರಡು ಪಂದ್ಯಗಳಲ್ಲಿಯೂ ಇದೇ ಪ್ರವೃತ್ತಿ ಮುಂದುವರೆದಿದೆ.
ಕ್ಯಾಮೆರಾ ಮುಂದೆ ಬೇರೆ ರೀತಿ ನಡೆದುಕೊಂಡರು
'ಟೂರ್ನಮೆಂಟ್ ಆರಂಭದಲ್ಲಿ ಅವರು (ಸೂರ್ಯಕುಮಾರ್) ಖಾಸಗಿಯಾಗಿ ನನ್ನೊಂದಿಗೆ ಕೈಕುಲುಕಿದರು. ಟೂರ್ನಿಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮತ್ತು ನಾವು ರೆಫರಿಯ ಸಭೆಯಲ್ಲಿ ಭೇಟಿಯಾದಾಗ ಕೈಲುಕಿದರು. ಆದರೆ, ಅವರು ಕ್ಯಾಮೆರಾಗಳ ಮುಂದೆ ನಮ್ಮೊಂದಿಗೆ ಕೈಕುಲುಕಲಿಲ್ಲ. ಅವರು ತಮಗೆ ಬಂದ ಸೂಚನೆಗಳನ್ನು ಅನುಸರಿಸುತ್ತಿದ್ದಾರೆ ಎಂದು ನನಗೆ ಖಚಿತವಾಗಿದೆ. ಒಂದು ವೇಳೆ ಅದು ಅವರ ನಿರ್ಧಾರವೇ ಆಗಿದ್ದರೆ, ಅವರು ನನ್ನೊಂದಿಗೆ ಕೈಕುಲುಕುತ್ತಿದ್ದರು' ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಹೇಳಿದರು.
ಭಾರತದಿಂದ ಕ್ರಿಕೆಟ್‌ಗೆ ಅಗೌರವ
ಭಾರತ ಕೈಕುಲುಕದೆ ಉತ್ತಮ ಉದಾಹರಣೆಯೊಂದಿಗೆ ಹೊರನಡೆಯಲಿಲ್ಲ. ಪಾಕಿಸ್ತಾನವು ಪಂದ್ಯವನ್ನು ಅಗೌರವಿಸಲು ಬಯಸದ ಕಾರಣ ರನ್ನರ್ ಅಪ್ ಪದಕವನ್ನು ಸ್ವೀಕರಿಸಲು ವೇದಿಕೆಯ ಮೇಲೆ ಹೋಯಿತು. ACC ಅಧ್ಯಕ್ಷರಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿರುವುದರಿಂದ, ಭಾರತಕ್ಕೆ ಹೇಗೆ ಟ್ರೋಫಿ ಸಿಗಲು ಸಾಧ್ಯ ಎಂದರು.
'ಈ ಟೂರ್ನಮೆಂಟ್‌ನಲ್ಲಿ ಭಾರತ ಮಾಡಿದ್ದು ತುಂಬಾ ನಿರಾಶಾದಾಯಕವಾಗಿದೆ. ಅವರು ಕೈಕುಲುಕದೆ ನಮಗೆ ಅಗೌರವ ತೋರಿದ್ದು ಮಾತ್ರವಲ್ಲದೆ, ಕ್ರಿಕೆಟ್‌ಗೆ ಅಗೌರವ ತೋರಿಸುತ್ತಿದ್ದಾರೆ. ಒಳ್ಳೆಯ ತಂಡಗಳು ಅವರು ಮಾಡಿದ ರೀತಿ ಮಾಡುವುದಿಲ್ಲ. ನಮ್ಮ ಜವಾಬ್ದಾರಿಗಳನ್ನು ಪೂರೈಸಲು ಟ್ರೋಫಿಯೊಂದಿಗೆ ನಾವೇ ಪೋಸ್ ನೀಡಲು ಹೋಗಿದ್ದೆವು. ನಾವು ಅಲ್ಲಿ ನಿಂತು ನಮ್ಮ ಪದಕಗಳನ್ನು ಪಡೆದುಕೊಂಡೆವು. ನಾನು ಕಠಿಣ ಪದಗಳನ್ನು ಬಳಸಲು ಬಯಸುವುದಿಲ್ಲ ಆದರೆ, ಅವರು ತುಂಬಾ ಅಗೌರವ ತೋರಿದ್ದಾರೆ' ಎಂದು ಹೇಳಿದರು.
ಪಂದ್ಯದ ನಂತರದ ಪ್ರಸ್ತುತಿ ಸಮಾರಂಭಕ್ಕೆ ಸುಮಾರು 100 ನಿಮಿಷಗಳ ವಿಳಂಬವಾಯಿತು. ಇದು ಸಾಮಾನ್ಯವಾಗಿ 20-30 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸಮಾರಂಭದಲ್ಲಿ, ಹಲವಾರು ಭಾರತೀಯ ಆಟಗಾರರು ಪ್ರಶಸ್ತಿಗಳನ್ನು ಪಡೆದರು ಆದರೆ ಭಾರತವು ನಖ್ವಿಯವರ ಕೈಯಿಂದ ಟ್ರೋಫಿಯನ್ನು ಪಡೆಯಲು ನಿರಾಕರಿಸಿತು. ಪಾಕಿಸ್ತಾನಿಯರಲ್ಲದ ವ್ಯಕ್ತಿಯಿಂದ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬದಲು, ACC ಸಮಾರಂಭವನ್ನು ಅಕಾಲಿಕವಾಗಿ ಕೊನೆಗೊಳಿಸಿತು ಮತ್ತು ಭಾರತಕ್ಕೆ ಟ್ರೋಫಿ ಸಿಗಲಿಲ್ಲ.
'ಇದೆಲ್ಲ ಆಗುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ಈ ಪಂದ್ಯಾವಳಿಯಲ್ಲಿ ಏನೇ ನಡೆದರೂ ಅದು ತುಂಬಾ ಕೆಟ್ಟದಾಗಿತ್ತು ಮತ್ತು ಇದು ಕ್ರಿಕೆಟ್‌ಗೂ ಕೆಟ್ಟದಾಗಿರುವುದರಿಂದ ಅದು ಒಂದು ಹಂತದಲ್ಲಿ ಅದು ನಿಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಇಂದು ನಡೆದಿದ್ದೆಲ್ಲವೂ (ಹಿಂದೆ) ನಡೆದ ಎಲ್ಲದರ ಪರಿಣಾಮವಾಗಿದೆ. ಖಂಡಿತ ಎಸಿಸಿ ಅಧ್ಯಕ್ಷರು ವಿಜೇತರಿಗೆ ಟ್ರೋಫಿಯನ್ನು ನೀಡುತ್ತಾರೆ. ನೀವು ಅವರಿಂದ ಟ್ರೋಫಿಯನ್ನು ತೆಗೆದುಕೊಳ್ಳದಿದ್ದರೆ, ನೀವು ಅದನ್ನು ಹೇಗೆ ಪಡೆಯುತ್ತೀರಿ?' ಎಂದು ಪ್ರಶ್ನಿಸಿದರು.